ಉದಯವಾಹಿನಿ, ಬೆಂಗಳೂರು: ಕೇಂದ್ರದಿಂದ 15ನೇ ಹಣಕಾಸು ಆಯೋಗದಲ್ಲಿ ಅನ್ಯಾಯವಾಗಿರುವ ಅನುದಾನ ರಾಜ್ಯಕ್ಕೆ ವಾಪಸ್ ಬಂದಿದೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೂ ನಿವೃತ್ತನಾಗುತ್ತೇನೆ. ಇಲ್ಲವಾದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾಜೀನಾಮೆ ಕೊಟ್ಟು, ರಾಜಕೀಯದಿಂದ ನಿವೃತ್ತರಾಗುತ್ತಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮಾಯಿ ಎಂದಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಕೇಂದ್ರದಿಂದ ಆಗುತ್ತಿರುವ ತೆರಿಗೆ ಅನ್ಯಾಯಕ್ಕೆ ನ್ಯಾಯಾಲಯಗಳಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹಣಕಾಸು ಆಯೋಗಗಳಿಂದಲೇ ಅನ್ಯಾಯ ಸರಿಪಡಿಸಲು ಸಾಧ್ಯ. 15ನೇ ಹಣಕಾಸು ಆಯೋಗದಿಂದ ಆಗಿರುವ ತಾರತಮ್ಯ ಸರಿಪಡಿಸಲು ಬೆಂಗಳೂರಿನ ಫೆರಿಪರಲ್ ರಿಂಗ್‌ರಸ್ತೆ ಹಾಗೂ ಕೆರೆ ಅಭಿವೃದ್ಧಿಗೆ ಸುಮಾರು 11,497 ಕೋಟಿ ಅನ್ಯಾಯವಾಗಿದೆ. ಇದು ಬಿಡುಗಡೆಯಾಗಿಲ್ಲ. ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಮೊತ್ತ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಲಿ. ನಾನು ರಾಜಕೀಯ ಬಿಡುತ್ತೇನೆ. ಜೋಷಿ ರಾಜಕೀಯ ಬಿಡುತ್ತಾರೆಯೇ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಬಿಜೆಪಿಯವರು ಏಕೆ ಬಾಯಿ ಬಿಡುತ್ತಿಲ್ಲ. ಕೇವಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನ್ಯಾಯೋಚಿತ ಪಾಲು ಕೇಳುವುದು ರಾಜಕೀಯವಲ್ಲ. ನಮ ಹೋರಾಟ ಎಂದರು.
