ಉದಯವಾಹಿನಿ ಸಂಡೂರು: “ಬಿಜೆಪಿ ಸರ್ಕಾರ ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಲೂಟಿ ಮಾಡಿತ್ತು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇಡೀ ಬಳ್ಳಾರಿ ಜಿಲ್ಲೆ ಜನ ಭಯದಿಂದ ಜೀವನ ಮಾಡುತ್ತಿದ್ದರು. ಈಗ ಜಿಲ್ಲೆ ಜನ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರ ಶಿವಕುಮಾರ ಅವರು ತಿಮಲಾಪುರ, ಎಳುಬೆಂಜಿಯಲ್ಲಿ ಮಂಗಳವಾರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
“ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹೇಗಿತ್ತು ಎಂದು ನೀವು ನೋಡಿದ್ದೀರಿ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಹೊಡೆದರು.
ಕೋವಿಡ್ ಸಮಯದಲ್ಲಿ ಯಾವುದೇ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ನಿಮಗೆ ಯಾವುದಾದರೂ ಬಂತಾ? ಬಡವರಿಗೆ ಸಹಾಯ ಮಾಡದಿದ್ದರೆ ಅಂತಹ ಸರ್ಕಾರ ಯಾಕೆ ಬೇಕು.ಕೋವಿಡ್ ಅಕ್ರಮದ ವರದಿ ಬಂದಿದೆ. ಅದನ್ನು ನೋಡಿ ನನಗೆ ಕೋವಿಡ್ ಬಂದಷ್ಟು ಭಯವಾಗಿದೆ.
