ಉದಯವಾಹಿನಿ, ಸುಳ್ಯ(ದಕ್ಷಿಣ ಕನ್ನಡ): ಶಬರಿಮಲೆ ಯಾತ್ರೆ ಮುಗಿಸಿ ಸಂಬಂಧಿಕರಿಗೆ ಪ್ರಸಾದ ವಿತರಿಸಲು ತೆರಳುತ್ತಿದ್ದ ತಂದೆ ಮತ್ತು ಮಗ ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದು ಕೆಳಗಡೆ ಉರುಳಿ ಬಿದ್ದಿದೆ. ಪರಿಣಾಮ ಮಗ ಸ್ಥಳದಲ್ಲೇ ಮೃತಪಟ್ಟರೆ, ತಂದೆಗೆ ಗಂಭೀರ ಗಾಯವಾದ ಘಟನೆ ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಸಂಭವಿಸಿದೆ.
ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಬಂಟ್ರ ಗ್ರಾಮದ ಕೊಲ್ಯ ನಿವಾಸಿ ಮೋನಪ್ಪ ಗೌಡ ಅವರ ಪುತ್ರ ನಿತೇಶ್ (20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ತಂದೆ ಮೋನಪ್ಪ ಗೌಡ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಬರಿಮಲೆ ಯಾತ್ರೆ ಮುಗಿಸಿಕೊಂಡು ಊರಿಗೆ ವಾಪಸಾದ ನಿತೇಶ್, ಪ್ರಸಾದವನ್ನು ಸಂಬಂಧಿಕರಿಗೆ ತಲುಪಿಸುವ ಉದ್ದೇಶದಿಂದ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಅವರು ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಳ ಚರಂಡಿಗೆ ಬಿದ್ದಿದೆ.ಅಪಘಾತದ ತೀವ್ರತೆಗೆ ನಿತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹ ಸವಾರರಾದ ತಂದೆಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಇಬ್ಬರೂ ಹೆಲ್ಮೆಟ್ ಧರಿಸಿದ್ದರೂ, ಡಿಕ್ಕಿಯ ರಭಸಕ್ಕೆ ಹೆಲ್ಮೆಟ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ನಿತೇಶ್ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಶಬರಿಮಲೆ ಯಾತ್ರೆ ಹಿನ್ನೆಲೆಯಲ್ಲಿ ರಜೆ ಪಡೆದು ಊರಿಗೆ ಆಗಮಿಸಿದ್ದರು. ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ಆವರಿಸಿದೆ. ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ನಿತೇಶ್ ಅಗಲಿದ್ದಾರೆ.
