ಉದಯವಾಹಿನಿ, ಕಾರವಾರ: ಉತ್ತರಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರವಾಗಿ ಈಗ ರಾಜ್ಯ ಸರ್ಕಾರ ಮತ್ತು ಪರಿಸರ ಹೋರಾಟಗಾರರ ನಡುವೆ ನೇರ ಹಣಾಹಣಿ ಶುರುವಾಗಿದೆ. ಇತ್ತೀಚೆಗೆ ಕಾರವಾರಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರತಿಭಟನೆಗಳು ಏನೇ ಇರಲಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ನೀಡಿದ್ದ ಹೇಳಿಕೆಯನ್ನು ಮಲೆನಾಡು ಮತ್ತು ಕರಾವಳಿ ಭಾಗದ ಪರಿಸರ ಪ್ರೇಮಿಗಳು ವಿರೋಧಿಸಿದ್ದಾರೆ.
ಡಿಸಿಎಂ ಅವರ ಈ ನಿಲುವನ್ನು ಬಂಗಾರಮಕ್ಕಿ ಮಹಾಸಂಸ್ಥಾನದ ಶ್ರೀ ಮಾರುತಿ ಗುರೂಜಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರು ಪಶ್ಚಿಮ ಘಟ್ಟದ ನೈಸರ್ಗಿಕ ಮಹತ್ವವನ್ನು ಅರಿಯದೇ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ವಿದೇಶಗಳಲ್ಲಿ ಇಂತಹ ಯೋಜನೆಗಳು ಯಶಸ್ವಿಯಾಗಿವೆ ಎಂಬ ಸರ್ಕಾರದ ವಾದಕ್ಕೆ ತಿರುಗೇಟು ನೀಡಿರುವ ಅವರು, ವಿದೇಶಗಳಲ್ಲಿ ಈಗ ಅಣೆಕಟ್ಟುಗಳನ್ನು ತೆರವುಗೊಳಿಸಿ ಪ್ರಕೃತಿಯನ್ನು ಮರುಸ್ಥಾಪಿಸುವ ಕೆಲಸವಾಗುತ್ತಿದೆ. ಆದರೆ ನಮ್ಮಲ್ಲಿ ಇರುವ ಅಪಾರ ಸಂಪತ್ತಿನ ಮೌಲ್ಯ ತಿಳಿಯದ ಸರ್ಕಾರ, ಅನಗತ್ಯ ಯೋಜನೆಗಳ ಮೂಲಕ ಹಾನಿ ಮಾಡಲು ಹೊರಟಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಘಟ್ಟದ ಕುರಿತಾದ ವೈಜ್ಞಾನಿಕ ವರದಿಗಳನ್ನು ಸರ್ಕಾರ ಒಮ್ಮೆ ಗಮನಿಸಲಿ ಎಂದು ಸಲಹೆ ನೀಡಿರುವ ಗುರೂಜಿ, ಸರ್ಕಾರದ ಉಚಿತ ಯೋಜನೆಗಳ ಬಗ್ಗೆಯೂ ಆಕ್ರೋಶ ಹೊರಹಾಕಿದ್ದಾರೆ. “ಯಾರೂ ನಿಮ್ಮ ಬಳಿ ಉಚಿತ ಸವಲತ್ತುಗಳನ್ನು ಕೇಳಿರಲಿಲ್ಲ, ಕೇವಲ ಅಧಿಕಾರದ ಆಸೆಗಾಗಿ ಇಂತಹ ಯೋಜನೆಗಳನ್ನು ಜಾರಿಗೆ ತಂದು ಈಗ ಅದನ್ನು ಸರಿದೂಗಿಸಲು ಪರಿಸರವನ್ನು ಬಲಿ ಕೊಡಲಾಗುತ್ತಿದೆ.
