ಉದಯವಾಹಿನಿ, ಹಾವೇರಿ: ಜಿಲ್ಲೆಯಲ್ಲಿ ಬಡಕುಟುಂಬಗಳು ಸೂರು ಇಲ್ಲದೇ ಜೀವಿಸುತ್ತಿವೆ. ಹಾವೇರಿಯ ನಾಗೇಂದ್ರನಮಟ್ಟಿಯ ಶಾಂತಿನಗರ ಬಸವೇಶ್ವರನಗರ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿ ಖಾಲಿ ನಿವೇಶನಗಳಲ್ಲಿ ವಿವಿಧ ಬಡಾವಣೆಗಳ ಖಾಲಿ ಜಾಗಗಳಲ್ಲಿ ಈ ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ.
ಹೌದು.. ಇಂತಹ ಕುಟುಂಬಗಳಿಗೆ ಸೂರು ಕಲ್ಪಿಸಲು ಹಾವೇರಿ ನಗರಸಭೆ ಕಳೆದ 4 ವರ್ಷದ ಹಿಂದೆ ವಿವಿಧ ಆಶ್ರಯ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಿತ್ತು. ಇದಕ್ಕಾಗಿ ಅರ್ಜಿಗಳನ್ನ ಅಹ್ವಾನಿಸಿ ನಿಜವಾಗಿ ಕಡುಬಡವರಿಗೆ ಮತ್ತು ಸೂರಿಲ್ಲದವರಿಗೆ ಮನೆ ನೀಡಲು ಹಾವೇರಿ ನಗರಸಭೆ ಯೋಜನೆ ರೂಪಿಸಿತ್ತು.
1,112 ಮನೆಗಳ ನಿರ್ಮಾಣಕ್ಕೆ ಮುಂದಾದ ನಗರಸಭೆ: ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಈ ಹಿಂದೆ ಸುಡುಗಾಡು ಸಿದ್ದರು ವಾಸಿಸುತ್ತಿದ್ದ ತಾತ್ಕಾಲಿಕ ತಗಡಿನ ಶೆಡ್ ಪ್ರದೇಶದಲ್ಲಿ ಸುಮಾರು 440 ಮನೆಗಳು ಮತ್ತು ಹಾವೇರಿ ಹೊರವಲಯದ ಉದಯನಗರದ ಬಳಿಯಲ್ಲಿ 770 ಮನೆಗಳ ನಿರ್ಮಾಣಕ್ಕೆ ಹಾವೇರಿ ನಗರಸಭೆ ಮುಂದಾಗಿತ್ತು. ಈ ಮನೆಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ನಗರಸಭೆಗೆ ಒಂದು ಲಕ್ಷ ರೂಪಾಯಿ ಹಣ ನೀಡಬೇಕು. ಅವರಿಗೆ ಸರ್ಕಾರದಿಂದ 2 ಲಕ್ಷ 28 ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ. ಅದೇ ರೀತಿ ಸಾಮಾನ್ಯ ವರ್ಗದ ಜನರು ಸಹ ಒಂದು ಲಕ್ಷ ರೂಪಾಯಿ ಹಣ ಕಟ್ಟಬೇಕು ಅವರಿಗೆ 3 ಲಕ್ಷ 80 ಸಾವಿರ ರೂಪಾಯಿ ಸಾಲ ಸೌಲಭ್ಯ ಇರುತ್ತೆ. ಒಂದು ಮನೆಗೆ ಸರ್ಕಾರ 6 ಲಕ್ಷ 68 ಸಾವಿರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟಿಸಿಕೊಡಲಾಗುತ್ತದೆ. ಮನೆಗಳ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿತ್ತು. ಆದರೆ, ಕಾರಣಾಂತರಗಳಿಂದ ನಾಲ್ಕು ವರ್ಷದಿಂದ ಮನೆಗಳ ನಿರ್ಮಾಣ ನಿಧಾನಗತಿಯಲ್ಲಿ ಸಾಗಿದೆ. ಪರಿಣಾಮ ಸ್ವಂತ ಸೂರಿನ ಕನಸು ಕಾಣುತ್ತಿರುವ ಬಡಕುಟುಂಬಗಳು ಮನೆಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿವೆ.
