ಉದಯವಾಹಿನಿ ವಿಜಯಪುರ: ‘ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಬೆಳಗಾವಿ, ಬೆಂಗಳೂರು ಮತ್ತು ಉಡುಪಿಯಲ್ಲಿ ಪರ್ಸಂಟೇಜ್‌ ಅಂಗಡಿ ತೆಗೆದಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ತಹಶೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಚಿವೆ ಹೆಬ್ಬಾಳಕರ ಪಿಎ ಹೆಸರನ್ನು ಬರೆದಿಟ್ಟಿರುವುದನ್ನು ನೋಡಿದರೆ ಸಚಿವರ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಆರೋಪಿಯನ್ನು ತಕ್ಷಣ ಬಂಧಿಸಬೇಕು. ಈ ಬಗ್ಗೆ ತನಿಖೆಯಾದರೆ ಸಚಿವೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಆಚೆ ಬರಲಿದೆ. ಮುಖ್ಯಮಂತ್ರಿಯವರು ತಕ್ಷಣ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.’ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಭ್ರಷ್ಟಾಚಾರದ ಪಾಪದ ಫಲ ತುಂಬಿದೆ. ಬೆಳಗಾವಿಯಲ್ಲಿ ಸಣ್ಣ ಕೆಲಸಕ್ಕೂ ಜನ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಡೆತ್‌ ನೋಟ್‌ನಲ್ಲಿ ಸಚಿವರ ಪಿಎ ಹೆಸರಿದೆ ಎಂದರೆ ಅದಕ್ಕೆ ಸಚಿವೆಯೇ ಕಾರಣ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.’ಈ ಹಿಂದೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ನವರು 40 ಪರ್ಸೆಂಟ್‌ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ 90 ಪರ್ಸೆಂಟ್‌ ಲಂಚದ ಸರ್ಕಾರವಾಗಿದೆ’ ಎಂದು ಆರೋಪಿಸಿದರು.’ಕಾಂಗ್ರೆಸ್‌ನವರು ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. ನಿಜವೇ ಆಗಿದ್ದರೇ ಇದುವರೆಗೆ ಏಕೆ ತನಿಖೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!