ಉದಯವಾಹಿನಿ, ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳು, ಬಾಲಕ, ಬಾಲಕಿಯರು ಹಾಗೂ ಮಹಿಳೆಯರ ಭಿಕ್ಷಾಟನೆ ಹೆಚ್ಚಾಗಿದೆ. ಜೋಲಿಗೆ ಕಟ್ಟಿಕೊಂಡ ಪುಟ್ಟಕಂದಮ್ಮಗಳನ್ನು ಹಾಗೂ ಹಸು, ದನಗಳನ್ನು ತೋರಿಸುತ್ತಾ ಅಂಗಡಿ, ಹೋಟೆಲ್, ಸರ್ಕಾರಿ ಕಚೇರಿ ಬಳಿ ಭಿಕ್ಷಾಟನೆ ಹೆಚ್ಚಾದರೂ, ಸಂಬಂಧಪಟ್ಟ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ.

ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನ ಹೋಟೆಲ್ ಮುಂದೆ ಜೋಲಿಗೆ ಕಟ್ಟಿಕೊಂಡ ನಿತ್ರಾಣವಾಗಿರಿಸಿರುವ ಕಂದಮ್ಮಗಳನ್ನು ಹಾಗೂ ಪುಟ್ಟ ಬಾಲಕರನ್ನು ಜನರಿಗೆ ತೋರಿಸಿ ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪಟ್ಟಣದ ಸಾರಿಗೆ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿದ ಬಸ್‌ಗಳ ಕಿಟಕಿಗಳ ಬಳಿ ಮಕ್ಕಳು, ಮಹಿಳೆಯರು ಭಿಕ್ಷಾಟನೆ ಮಾಡುತ್ತಿದ್ದಾರೆ.
ತಾಲ್ಲೂಕು ಕಚೇರಿ, ಡಾ.ಎಚ್.ಎನ್.ವೃತ್ತ, ಕುಂಬಾರಪೇಟೆ ವೃತ್ತ, ಭಜನಾ ಮಂದಿರ ರಸ್ತೆಯ ವೃತ್ತ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾರೆ. ಜನರ ಬಳಿಗೆ ಮಕ್ಕಳನ್ನು ಕಳಿಸಿ ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಕಾರ್ತಿಕ ಮಾಸದಲ್ಲಿ ದನ, ಹಸುಗಳ ಪೂಜೆಗೆ ಪ್ರಾಮುಖ್ಯತೆ ಇರುವುದರಿಂದ ಇದನ್ನೇ ಮಹಿಳೆಯರು, ಹೆಣ್ಣುಮಕ್ಕಳು ನೆಪ ಮಾಡಿಕೊಂಡು ಹಸುಗಳನ್ನು ತೋರಿಸುತ್ತಾ ಭಿಕ್ಷಾಟನೆಗೆ ಇಳಿಯುತ್ತಾರೆ.
ಜೋಲಿಗೆ ಕಟ್ಟಿಕೊಂಡ ಪುಟ್ಟಕಂದಮ್ಮಗಳು ಸದಾ ಮಲಗಿರುತ್ತವೆ. ಭಿಕ್ಷಾಟನೆ ನಿರತ ಹೆಣ್ಣು ಮಕ್ಕಳ, ಮಹಿಳೆಯರಿಗೆ ಕೂಡಲೇ ಪುನರ್ವಸತಿ ಕಲ್ಪಿಸಬೇಕು ಎಂದು ವಕೀಲ ಎ.ಜಿ.ಸುಧಾಕರ್ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!