ಉದಯವಾಹಿನಿ, ಉಜಿರೆ: ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (ಎಸ್‌ಕೆಡಿಆರ್‌ಡಿಪಿ) ಸರ್ಕಾರದ ಗ್ರಾಮಾಭಿವೃದ್ಧಿ ಯೋಜನೆಗಳ ಪ್ರಯೋಗಶಾಲೆ ಇದ್ದಂತೆ. ಇಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾದ ಕಾರ್ಯಕ್ರಮಗಳ ಯಶಸ್ಸನ್ನು ಆಧರಿಸಿ ಅವುಗಳನ್ನು ರಾಷ್ಟ್ರಮಟ್ಟದಲ್ಲಿ ಸರ್ಕಾರದ‌ ನೀತಿಯಾಗಿ ಜಾರಿಗೊಳಿಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಹೇಳಿದರು.
ಎಸ್‌ಕೆಡಿಆರ್‌ಡಿಪಿ- ಬಿ.ಸಿ. ಟ್ರಸ್ಟ್‌ ವತಿಯಿಂದ ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಅವರು ಮಾತನಾಡಿದರು.
‘ಧರ್ಮಸ್ಥಳದ ಸಮೂಹ ಸಂಸ್ಥೆಗಳು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದ ಜೊತೆ ಸಹಕರಿಸುತ್ತಿವೆ. ಗ್ರಾಮಿಣಾಭಿವೃದ್ಧಿಗಾಗಿ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಳ್ಳುತ್ತಿವೆ. ಸರ್ಕಾರದ ನೀತಿಯೂ ಇದನ್ನು ಗುರುತಿಸಿದೆ’ ಎಂದರು.

‘ಮಹಿಳೆಯರಲ್ಲಿಯೂ ಸಾಮರ್ಥ್ಯವಿದೆ. ಅವರೂ ಉತ್ಪನ್ನ ತಯಾರಿಸಬಲ್ಲರು, ಮೌಲ್ಯವರ್ಧನೆ ಮಾಡಿ ಲಾಭ ಗಳಿಸಬಲ್ಲರು, ಅವರೂ ಮಾರುಕಟ್ಟೆ ಸೃಷ್ಟಿಸಿ ಘನತೆಯಿಂದ ಬದುಕು ಕಟ್ಟಿಕೊಳ್ಳಬಲ್ಲರು ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ. ಗ್ರಾಮೀಣಾಭಿವೃದ್ಧಿ ಯೋಜನೆ ಪರಿಣಾಮಕಾರಿ‌ ಅನುಷ್ಠಾನದಿಂದಾಗಿಯೇ ‌‌ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವುದು ಸಾಧ್ಯವಾಗಿದೆ. ಜನರ ಸಬಲೀಕರಣವೇ ದೇಶದ ಬಡತನ‌ ನಿರ್ಮೂಲನೆಗೆ ಸಾಧನ. ಹಣ ಗಳಿಸುವ, ಸ್ವಂತ ನಿರ್ಧಾರ ತಳೆಯುವ ಅವಕಾಶಗಳನ್ನು ಇದು ಕಲ್ಪಿಸುತ್ತಿದೆ.‌ ಸರ್ಕಾರವು ಜನರ ತೆರಿಗೆ ದುಡ್ಡಿನಲ್ಲಿ ರೂಪಿಸಿರುವ ಡಿಜಿಟಲ್‌ ವೇದಿಕೆಗಳನ್ನು ಸ್ವಸಹಾಯ ಸಂಘಗಳೂ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಳಸುತ್ತಿವೆ’ ಎಂದರು.

‘ವಿದೇಶಿಯರ ಆಳ್ವಿಕೆಯ ಕಾಲದಲ್ಲಿ ಕಳೆದುಕೊಂಡ ವೈಭವವನ್ನು ನಾವು ಸ್ವಸಾಮರ್ಥ್ಯದಿಂದಲೇ ಮರಳಿ ಪಡೆಯಬೇಕಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸನ್ನು ಈಡೇರಿಸಬೇಕಿದೆ’ ಎಂದರು.

 

Leave a Reply

Your email address will not be published. Required fields are marked *

error: Content is protected !!