ಉದಯವಾಹಿನಿ, ಕಾಳಿಂಗ ಸರ್ಪವನ್ನು ನೋಡಿದರೆ ಸಾಕು ಒಂದು ಕ್ಷಣ ಮೈಯೆಲ್ಲ ನಡುಗುತ್ತದೆ. ಭಯಕ್ಕೆ ಇನ್ನೊಂದು ಹೆಸರೇ ಕಾಳಿಂಗ ಸರ್ಪ. ತನ್ನ ಉದ್ದವಾದ ದೇಹ ಮತ್ತು ಸ್ಥಿರವಾದ ನೋಟದಿಂದಲೇ ಎಲ್ಲರನ್ನು ಭಯ ಬೀಳಿಸುತ್ತದೆ. ಎಡೆಯನ್ನು ಬಿಚ್ಚಿ 19 ಅಡಿ ಎತ್ತರದವರೆಗೂ ಭವ್ಯವಾಗಿ ನಿಲ್ಲುವ ಈ ಜಾತಿಯ ಹಾವು ತನ್ನ ಗಾಂಭೀರ್ಯತೆಯಿಂದಲೇ ಹಾವುಗಳ ರಾಜ ಎಂಬ ಬಿರುದನ್ನು ಪಡೆದುಕೊಂಡಿದೆ.ಈ ಕಾಳಿಂಗ ಸರ್ಪ ತೀವ್ರ ಸ್ವರೂಪದ ವಿಷ ಹೊಂದಿರುವ ಹಾವುಗಳಾಗಿದ್ದು, ಬಲು ಅಪಾಯಕಾರಿಯಾಗಿವೆ.ಕಾಳಿಂಗ ಸರ್ಪ ಕೇವಲ ಒಂದೇ ಜಾತಿಯ ಹಾವು ಎಂದು ಇಲ್ಲಿಯವರೆಗೆ ನಂಬಲಾಗಿದೆ. ಇದು ಓಫಿಯೋಫಾಗಸ್ ಹನ್ನಾ ಕುಲಕ್ಕೆ ಸೇರಿದೆ ಎಂದು ಕಳೆದ 188 ವರ್ಷಗಳಿಂದ ನಂಬಲಾಗಿತ್ತು. ಆದರೆ, ಈಗ ನಾಲ್ಕು ಜಾತಿಯ ಕಾಳಿಂಗ ಸರ್ಪಗಳಿರುವುದು ಪತ್ತೆಯಾಗಿದೆ. ಕೊನೆಗೂ 188 ವರ್ಷದ ನಿಗೂಢ ರಹಸ್ಯ ಬಯಲಾಗಿದೆ.
ಹೌದು, ಕರ್ನಾಟಕದ ಆಗುಂಬೆಯಲ್ಲಿರುವ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿಯ ಸಂಶೋಧಕರು ಇಂಥದ್ದೊಂದು ಆವಿಷ್ಕಾರ ಮಾಡಿದ್ದಾರೆ. ಒಂದು ಕಾಲದಲ್ಲಿ ಒಂದೇ ಜಾತಿಯೆಂದು ಪರಿಗಣಿಸಲ್ಪಟ್ಟ ಕಾಳಿಂಗ ಸರ್ಪ, ನಾಲ್ಕು ವಿಭಿನ್ನ ಜಾತಿಗಳನ್ನು ಒಳಗೊಂಡಿದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. 2012ರಲ್ಲಿ ಪ್ರಾರಂಭವಾದ ಕಾಳಿಂಗ ಸರ್ಪ ಜಾತಿಗಳ ಅಧ್ಯಯನದಲ್ಲಿ, ನಿರ್ಣಾಯಕ ಆವಿಷ್ಕಾರ ಮಾಡಲಾಗಿದೆ.2012 ರಿಂದ 2024 ರವರೆಗೆ 12 ವರ್ಷಗಳ ಸುದೀರ್ಘ ಅಧ್ಯಯನ ಮಾಡಲಾಗಿದೆ.
