ಉದಯವಾಹಿನಿ, ಮಂಗಳೂರು: ‘ಶಿಕ್ಷಕರು ವಿದ್ಯಾರ್ಥಿಗಳ ಪೂರ್ವಾಪರಗಳನ್ನು ಅರಿತು, ಅವರ ಅಗತ್ಯಗಳೇನು ಎಂಬುದನ್ನು ತಿಳಿದುಕೊಂಡು ಅವರ ಮನಸ್ಸನ್ನು ರೂಪಿಸುವ ಕಲಾವಿದರಾಗಬೇಕು. ಶಿಕ್ಷಣವು ಉತ್ಕೃಷ್ಟತೆ, ಸ್ವಾವಲಂಬನೆ ಹಾಗೂ ಪರಿವರ್ತನೆಗೆ ಸಾಧನವಾಗಬೇಕು’ ಎಂದು ಭಗಿನಿ ಮಾರಿಯೆಟ್ ಬಿ.ಎಸ್ ಹೇಳಿದರು.
ಮಂಗಳೂರು ಪ್ರಾಂತ್ಯದ ಬೆಥನಿ ಎಜುಕೇಶನಲ್ ಸೊಸೈಟಿ (ಬಿಇಎಸ್) ಆಶ್ರಯದಲ್ಲಿ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಹೈಸ್ಕೂಲ್‌ನಲ್ಲಿ ‘ಮಾನವ ಸಹೋದರತ್ವದ ಕಡೆಗೆ ಸಮೃದ್ಧ ಬದುಕಿಗಾಗಿ ಪರಿವರ್ತನಾತ್ಮಕ ಶಿಕ್ಷಣ’ ಎಂಬ ಧೈಯದೊಂದಿಗೆ ಬುಧವಾರ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಧರ್ಮ ಪ್ರಾಂತ್ಯದ ಫಾ.ಸ್ನಾನಿ ಡಿಸೋಜ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದದ ಮೌಲ್ಯಗಳ ಅವಶ್ಯಕತೆ ಇದೆ. ಸಂವಿಧಾನಾತ್ಮಕ ಮೌಲ್ಯಗಳ ಆಶಯ ಎತ್ತಿಹಿಡಿಯಬೇಕಿದೆ’ ಎಂದರು.
ಮಾತೃಭೂಮಿಯ ಕಾಳಜಿ ವಹಿಸುವಿಕೆಯನ್ನು ಶಾಲಾ ಶಿಕ್ಷಣದಲ್ಲಿ ಪ್ರಾಯೋಗಿಕವಾಗಿ ಅಳವಡಿಸುವ ವಿಧಾನದ ಕುರಿತು ಪ್ರಾಂತ್ಯದ ಅಧಿಕಾರಿ ಭಗಿನಿ ಲಿಲ್ಲಿ ಪಿರೇರಾ ವಿವರಿಸಿದರು.
ಬೆಥನಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಭಗಿನಿ ಸಂಧ್ಯಾ ಬಿ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕಿ ಭಗಿನಿ ಮಾರಿಯೊಲಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕಿ ಲವಿಟಾ ಜ್ಯೋತಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಸವಿತಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. 235 ಶಿಕ್ಷಕರು ಭಾಗವಹಿಸಿದರು.
