ಉದಯವಾಹಿನಿ, ಬಳ್ಳಾರಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಮಹತ್ವಾಕಂಕ್ಷಿ ಯೋಜನೆಗಳಲ್ಲಿ ಒಂದಾದ ‘ಅನ್ನ ಭಾಗ್ಯ’ ಯೋಜನೆಯು ಬಡತನ ರೇಖೆಗಿಂತ ಕಡಿಮೆ ಇರುವ(ಬಿಪಿಎಲ್) ಪಡಿತರ ಕಾರ್ಡ್ ಹೊಂದಿದ ಬಡ ಕುಟುಂಬದವರ ಹಸಿವು ನೀಗಿಸುವುದರೊಂದಿಗೆ ಸಾಮಾನ್ಯರ ಬದುಕು ಹಸನಗೊಂಡಿದೆ.
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡು ಹೊಂದಿರುವರ ಪ್ರತಿ ಕುಟುಂಬದ ತಲಾ ಒಬ್ಬರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದರಂತೆ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 05 ಕೆ.ಜಿ. ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 05 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದರಂತೆಯೇ ಕಳೆದ 2023ರ ಜುಲೈ ತಿಂಗಳಿನಿಂದಲೇ ಹಣ ಪಾವತಿ ಮಾಡಲಾಗುತ್ತಿದೆ.
