ಉದಯವಾಹಿನಿ, ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರಾಗಿದ್ದ ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಜಯಗಳಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಗಟ್ಟಿ ಮಾಡಿಕೊಂಡಿದ್ದಾರೆ.
ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡಿದ್ದು, ಮೂರನೇ ಬಾರಿ ಚುನಾವಣೆ ಯಲ್ಲಿ ಸೋಲುವ ಮೂಲಕ ಎನ್ಡಿಎ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಸಮರವೆಂದೇ ಬಿಂಬಿಸಲಾಗಿದ್ದ ಈ ಕ್ಷೇತ್ರದ ಚುನಾವಣಾ ಫಲಿತಾಂಶ ನಿರೀಕ್ಷೆ ಮೀರಿದ್ದು, ಅಚ್ಚರಿ ಪಡುವಂತಾಗಿದೆ. ಚುನಾವಣೋತ್ತರ ಸಮೀಕ್ಷೆ ಹಾಗೂ ಲೆಕ್ಕಾಚಾರಗಳು ತಲೆಕೆಳಕಾಗುವಂತೆ ಮಾಡಿದೆ.
ಚನ್ನಪಟ್ಟಣದ ಮತದಾರರು ಆಶೀರ್ವಾದ ಮಾಡುವ ಮೂಲಕ ಯೋಗೇಶ್ವರ್ ರಾಜಕೀಯ ಭವಿಷ್ಯ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಹಾಗೆಯೇ ಜೆಡಿಎಸ್ ನೆಲೆ ಕಳೆದುಕೊಳ್ಳವಂತೆ ಮಾಡಿದ್ದು, ಕಾಂಗ್ರೆಸ್ ಮರಳಿ ಬಲಗೊಳ್ಳುವಂತಾಗಿದೆ. ವಲಸಿಗ ಮತ್ತು ಪಕ್ಷಾಂತರಿ ಎಂಬ ವಿಚಾರ ರಾಜಕೀಯವಾಗಿ ಕ್ಷೇತ್ರದಲ್ಲಿ ಚರ್ಚೆಯಾಗಿತ್ತು. ಮತದಾರರ ಒಲವು ಸ್ಥಳೀಯರತ್ತ ಎಂಬುದು ಸಾಬೀತು ಮಾಡಿದಂತಾಗಿದೆ.
ನಿಖಿಲ್ ಕುಮಾರಸ್ವಾಮಿ ಅವರನ್ನು 25357 ಮತಗಳ ಅಂತರದಿಂದ ಯೋಗೇಶ್ವರ್ ಮಣಿಸಿದ್ದಾರೆ. ಯೋಗೇಶ್ವರ್ 112388 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿಯಾದ ನಿಕಿಲ್ ಕುಮಾರಸ್ವಾಮಿ ಅವರು 870315 ಮತಗಳನ್ನು ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಇದುವರೆಗೂ 9 ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯೋಗೇಶ್ವರ್ಗೆ ಇದು ಆರನೇ ಗೆಲುವಾಗಿದೆ. ಯೋಗೇಶ್ವರ್ ಮೊದಲ ಸುತ್ತಿನಲ್ಲಿ ಅಲ್ಪ ಮುನ್ನಡೆಯಲಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಿತ್ತು. ಆದರೆ, ಎರಡನೇ ಸುತ್ತಿನ ನಂತರ ಆರನೇ ಸುತ್ತಿನವರೆಗೂ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದರು. ಆಗ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿತ್ತು. ಗೆಲುವಿನ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಅಣಿಯಾಗುತ್ತಿದ್ದರು.
