ಉದಯವಾಹಿನಿ , ಕೆ.ಆರ್. ಪುರ: ದಾಸ ಪದಗಳ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬದಲಾವಣೆ ತಂದವರು ಕನಕದಾಸರು ಎಂದು ಕುರುಬರ ಸಂಘದ ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಅಗರ ಆರ್.ಪ್ರಕಾಶ್ ಅವರು ಹೇಳಿದರು.
ಕೆ.ಆರ್.ಪುರ ಕ್ಷೇತ್ರದ ಹೊರಮಾವು ಅಗರದಲ್ಲಿ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಕಾರ್ಯ ಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು. ಸಮಾಜದಲ್ಲಿನ ಅಜ್ಞಾನ ತೊಡೆದು ಹಾಕಿ ಜ್ಞಾನದ ಮಾರ್ಗ ತೋರಿಸಿಕೊಟ್ಟವರು ಅವರು. ಕವಿ ಮತ್ತು ಸಂತರ ಸಂಗಮವಾದ ಕನಕದಾಸರು ಸಮಾಜಕ್ಕೆ ಮೌಲ್ಯಯುತ ಸಂದೇಶ ಸಾರಿದವರು.
ಕೀರ್ತನೆಕಾರರಾಗಿ, ಸಂತನಾಗಿ, ದಾರ್ಶನಿಕನಾಗಿ ಸಾಹಿತ್ಯ, ಸಂಗೀತ ಲೋಕಕ್ಕೆ ತನ್ನದೇ ಕೊಡುಗೆಗಳನ್ನು ನೀಡಿದ್ದಾರೆ.
ಸುಮಾರು ೩೦೦ಕ್ಕೂ ಅಧಿಕ ಕೀರ್ತನೆಗಳು, ಕಾವ್ಯಕೃತಿಗಳನ್ನು ರಚಿಸಿರುವ ಕನಕದಾಸರು ವ್ಯಾಸರಾಯರ ಶಿಷ್ಯರಾಗಿ, ಶ್ರೀಕೃಷ್ಣನ ಪರಮಭಕ್ತರಾಗಿದ್ದರು.
ಹರಿದಾಸ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಿದವರು. ಕೀರ್ತನೆಗಳನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಕನ್ನಡ ಭಾಷೆಯಲ್ಲಿ ರಚಿಸಿ ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದವರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಎ.ನಾರಾಯಣಪ್ಪ, ಸುಬ್ಬರಾಮಪ್ಪ, ಪ್ರಕಾಶ್, ಲಕ್ಷ್ಮಯ್ಯ, ಕೃಷ್ಣಪ್ಪ, ಲಕ್ಷ್ಮಣ, ಮಾಲೂರಪ್ಪ,ಹನುಮೇಗೌಡ, ಪಟೇಲಪ್ಪ,ನಂಜಪ್ಪ ರಾಮಾಂಜಿನಪ್ಪ, ಚಂದ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.
