ಉದಯವಾಹಿನಿ, ಮಂಗಳೂರು: ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ರಾಜ್ಯ ಸಚಿವ ಸಂಪುಟ ಈಚೆಗೆ ಅನುಮೋದನೆ ನೀಡಿದೆ. ಹೊಸ ಬಗೆಯ ಪ್ರವಾಸಿ ಆಕರ್ಷಣೆಗಳಿಗೆ ಪೂರಕವಾದ ಭೌಗೋಳಿಕತೆ, ಸಾಂಸ್ಕೃತಿಕ ಮತ್ತು ಪಾರಂಪರಿಕ ಹಿನ್ನೆಲೆಯನ್ನು ಹೊಂದಿರುವ ಕರಾವಳಿಯ ಪ್ರವಾಸೋದ್ಯಮಕ್ಕೆ ಈ ನೀತಿ ಹೊಸ ಹುರುಪು ತುಂಬುವ ವಿಶ್ವಾಸ ಮೂಡಿಸಿದೆ.
ಹೊಸ ನೀತಿಯಲ್ಲಿ ಪ್ರಮುಖವಾಗಿ ಒಂಬತ್ತು ಕೇಂದ್ರೀಕೃತ ಕ್ಷೇತ್ರಗಳು, 25 ವಿಷಯಾಧಾರಿತ ಕ್ಷೇತ್ರಗಳು ಹಾಗೂ ಅದಕ್ಕೆ ಪೂರಕವಾಗಿ 44 ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ.
ಕೃಷಿ ಪ್ರವಾಸ, ಸ್ವಾಸ್ಥ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸ, ಪಾರಂಪರಿಕ ತಾಣ ಭೇಟಿ, ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನಃಶಾಂತಿ, ವಿಶ್ರಾಂತಿ ಮುಂತಾದ ಅಂಶಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಕರಾವಳಿಯ ಪ್ರವಾಸೋದ್ಯಮದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ರಾಜ್ಯದ 320 ಕಿ.ಮೀ ಉದ್ದದ ಕರಾವಳಿಯಲ್ಲಿರುವ ಪ್ರವಾಸಿ ತಾಣಗಳು 2023ರಲ್ಲಿ 8 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ್ದವು. ರಾಜ್ಯದ ಒಟ್ಟು ಪ್ರವಾಸಿಗರಲ್ಲಿ ಕರಾವಳಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದವರ ಪಾಲು ಶೇ 12ರಿಂದ ಶೇ 15ರಷ್ಟಿದೆ.

Leave a Reply

Your email address will not be published. Required fields are marked *

error: Content is protected !!