ಉದಯವಾಹಿನಿ, ಚಂಡೀಗಢ: ರೈತರ ಬೇಡಿಕೆಗಳಿಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಖಾನೌರಿ ಗಡಿ ಭಾಗದಿಂದ ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಕಿಸಾನ್ ಮಜ್ದೂರ್ ಮೋರ್ಚಾದ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿಗಾಗಿ ಒತ್ತಾಯಿಸಿ ಇಂದಿನಿಂದ ಆಮರಣಾಂತ ಉಪವಾಸ ಆರಂಭಿಸುವುದಾಗಿ ದಲ್ಲೆವಾಲ್ ನಿನ್ನೆ ಘೋಷಿಸಿದ್ದರು. ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅವರು ಪ್ರತಿಪಾದಿಸಿದ್ದರು. ಮುಂಜಾನೆ ದಲ್ಲೆವಾಲ್ ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವ ಮೊದಲು ಪೊಲೀಸರು ಬಲವಂತವಾಗಿ ಸ್ಥಳದಿಂದ ಅವರು ಕರೆದೊಯ್ದಿದ್ದಾರೆ ಎಂದು ಪ್ರತಿಪಾದಿಸಿದ ಪಂಧೇರ್ ಅವರು ಈ ಕತ್ಯವನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿದರು.
