ಉದಯವಾಹಿನಿ, ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನವದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿರುವ ವಿಜಯೇಂದ್ರ, ರಾಜ್ಯ ಬಿಜೆಪಿಯೊಳಗಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ ಮಾಡಲಿದ್ದಾರೆ.ನವದೆಹಲಿಗೆ ತೆರಳಿರುವ ವಿಜಯೇಂದ್ರ ಯಾವುದೇ ಕ್ಷಣದಲ್ಲಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವರೆಂದು ಪಕ್ಷದ ಮೂಲಗಳು ತಿಳಿಸಿವೆ.
ವಕ್‌್ಫ ನೋಟೀಸ್ ವಿರುದ್ಧ ಪಕ್ಷದ ಅನುಮತಿ ಪಡೆಯದೆ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ್ ಪಕ್ಷಕ್ಕೆ ವಂಚಿಸುತ್ತಿದ್ದಾರೆ. ಕೂಡಲೇ ಅವರಿಗೆ ಕಡಿವಾಣ ಹಾಕುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಜನಜಾಗೃತಿ ಅಭಿಯಾನದ ವೇಳೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ದ ಮಾತನಾಡುವ ಬದಲು ನಮ ಕುಟುಂಬದ ವಿರುದ್ಧ ಟೀಕೆ ಮಾಡುತ್ತಾ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ಆಹಾರವಾಗಿ ಪರಿಣಮಿಸಿದೆ. ಹೀಗಾಗಿ ಯತ್ನಾಳ್ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ದೂರುಗಳ ಪಟ್ಟಿಯನ್ನು ನೀಡಲಿದ್ದಾರೆ.
ನನ್ನನ್ನು ಯಾರೂ ಕೂಡ ಏನೂ ಮಾಡಲಾರರು ಎಂಬ ದಾರ್ಷ್ಯದಿಂದಲೇ ಎಲ್ಲರ ವಿರುದ್ಧವೂ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ತಕ್ಷಣವೇ ಅವರ ಬಾಯಿಗೆ ಬೀಗ ಹಾಕದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಹಾನಿಯಾಗಲಿದೆ. ವರಿಷ್ಠರು ವಿಳಂಬ ಮಾಡಿದಷ್ಟೂ ಪಕ್ಷಕ್ಕೆ ಮುಳುವಾಗಲಿದೆ ಎಂದು ವಿವರಣೆ ನೀಡಲಿದ್ದಾರೆ.
