ಉದಯವಾಹಿನಿ ,ಬೆಂಗಳೂರು: ಚಂದ್ರಶೇಖರ್ ಸ್ವಾಮೀಜಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಂಗಲ್ ಹನುಮಂತಯ್ಯ ಅವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅನಂತರ ನನಗೆ ಬೇರೆ ದಾರಿ ಇಲ್ಲದೆ ಅಹಿಂದ ಸಂಘಟನೆ ಮಾಡಿದ್ದೆ. ಈಗ ಹಾಸನದಲ್ಲಿ ಸಮಾವೇಶ ನಡೆಸುತ್ತಿರುವುದರ ಹಿಂದೆ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ಇದೆ ಎಂದರು. ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಆಹ್ವಾನಿಸಲಾಗಿದೆ. ಪಕ್ಷ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು.
