ಉದಯವಾಹಿನಿ, ಹನೂರು : ಮಳೆ ಹಿನ್ನೆಲೆ ವಿಳಂಬವಾಗಿ ಶಾಲಾ ಕಾಲೇಜುಗಳಿಗೆ ದಿಢೀರ್ ರಜೆ ಘೋಷಿಸಿದ್ದು ವಿದ್ಯಾರ್ಥಿಗಳ ಪಾಲಿಗೆ ಸಜೆಯಾಗಿ ಪರಿಣಮಿಸಿದ್ದು ಅತ್ತ ಶಾಲೆಗೂ ತೆರಳಲಾಗದೆ ಇತ್ತ ಮನೆಗೂ ಮರಳಲಾಗದೆ ಅತಂತ್ರ ಸ್ಥಿತಿಯಲ್ಲಿ ಪುಟ್ಟ ಮಕ್ಕಳು ಪಟ್ಟ ಪಡಿಪಾಟಲು ಗೋಳಾಟ ಹೇಳತೀರದಾಗಿತ್ತು.
ಮಕ್ಕಳ ಬಗ್ಗೆ ಜಿಲ್ಲಾಡಳಿತಕ್ಕೆ ನೈಜ ಕಾಳಜಿ ಇದ್ದಿದ್ದೇ ಆಗಿದ್ದಲ್ಲಿ ಒಂದು ದಿನ ಮುಂಚಿತವಾಗಿ ನಿನ್ನೆಯೇ ರಜೆ ಘೋಷಿಸಿದ್ದರೆ ಗಡಿ ಗ್ರಾಮಗಳ ಮಕ್ಕಳು ಬೆಳ್ಳಂಬೆಳಗ್ಗೆ ಗಡಿಬಿಡಿಯಲ್ಲಿ ಎದ್ದೆವೋ ಬಿದ್ದೆವೋ ಎಂದು ತರಾತುರಿಯಲ್ಲಿ ಮಳೆಯಲ್ಲಿ ನೆನೆದು ನೂಕುನುಗ್ಗಲಿನಲ್ಲಿ ಬಸ್ಸನ್ನೇರಿ ಶಾಲಾ ಕಾಲೇಜುಗಳಿಗೆ ಬರುವ ಅಗತ್ಯವಿರಲಿಲ್ಲ.
ಮಾನ್ಯ ಜಿಲ್ಲಾಧಿಕಾರಿಗಳು ಪೂರ್ವಾಪರ ಯೋಚಿಸದೆ ತೋಚಿದ್ದೇ ಗೀಚಿದ್ದು ಎಂಬಂತೆ ಜ್ಞಾನೋದಯವಾದವರಂತೆ ದಿಗ್ಗನೆದ್ದು ಬೆಳಗ್ಗೆ 7-00 ರ ನಂತರದಲ್ಲಿ ಮಳೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಈ ದಿನ ರಜೆ ಎಂದು ಘೋಷಿಸಿ ಸುಮ್ಮನಾಗುತ್ತಾರೆ. ಅದು ಅನುಷ್ಟಾನಕ್ಕೆ ಬಂದು ಶಾಲಾಡಳಿತ ಮಂಡಳಿ, ಮಕ್ಕಳ ಗಮನಕ್ಕೆ ಬರುವಷ್ಟರಲ್ಲಿ ಅದೂ ಸಾಮಾಜಿಕ ಜಾಲ ತಾಣದಲ್ಲಿ ಸಮಯ 8-00 ರ ಗಡಿ ದಾಟಿತ್ತು.
