ಉದಯವಾಹಿನಿ, ಕುಷ್ಟಗಿ: ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರೂ ಸೇರಿದಂತೆ ಅನರ್ಹರೂ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಪಡಿತರ ಚೀಟಿ ಹೊಂದಿರುವುದು ತಾಲ್ಲೂಕಿನಲ್ಲಿ ಕಂಡುಬಂದಿದೆ.
ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್ ಆಗಿ ಪರಿವರ್ತಿಸಿರುವ ವಿಷಯ ರಾಜ್ಯದಲ್ಲಿ ಚರ್ಚೆಯಲ್ಲಿದ್ದು, ತಾಲ್ಲೂಕಿನಲ್ಲೂ ಆಹಾರ ಇಲಾಖೆ ಪರಿಶೀಲನೆಯಲ್ಲಿ ತೊಡಗಿದ್ದು, ಅನರ್ಹ ಪಡಿತರ ಚೀಟಿದಾರರನ್ನು ಜಾಲಾಡುತ್ತಿದೆ.
ಅಂತಹವರನ್ನು ಪತ್ತೆ ಮಾಡಿ ಕಾರ್ಡ್‌ಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೂ ಕನಿಷ್ಠ ಆರೇಳು ತಿಂಗಳಿನಿಂದಲೂ 1,250 ಜನರು ನ್ಯಾಯಬೆಲೆ ಅಂಗಡಿಗಳತ್ತ ಸುಳಿದಿಲ್ಲ. ಒಟ್ಟಾರೆ ಪಡಿತರ ವಸ್ತುಗಳನ್ನೂ ಪಡೆಯದಿರುವುದು ಗೊತ್ತಾಗಿದೆ. ಅಂತಹ ಬಿಪಿಎಲ್ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ತಾತ್ಕಾಲಿಕ ಸ್ಥಗಿತಗೊಳಿಸಿದೆ.
