ಉದಯವಾಹಿನಿ , ಬೆಂಗಳೂರು: ತಮ ಭಂಡತನ ಮುಂದುವರಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯ ಹಿಂದಿನ ಮುಖ್ಯಮಂತ್ರಿ ಕೇಜ್ರಿವಾಲರಂತೆ ಜೈಲಿಗೆ ಹೋದರೂ ಮುಖ್ಯಮಂತ್ರಿ ಗಾದಿ ಬಿಡುವುದಿಲ್ಲ ಎಂಬ ಶಪಥ ಕೈಗೊಂಡಂತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ,ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟ್ ಮಾಡಿರುವ ಅವರು, ನಿಶಕ್ತ ಎಐಸಿಸಿಯ ದೆಹಲಿ ಹೈಕಮಾಂಡ್ ಸಿದ್ದರಾಮಯ್ಯನವರ ಮುಂದೆ ಮಂಡಿಯೂರಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಲೋಕಾಯುಕ್ತದ ತನಿಖೆಯ ದಿಕ್ಕು ಅನುಮಾನ ಮೂಡಿಸಿರುವ ನಡುವೆ ಜಾರಿ ನಿರ್ದೇಶನಾಲಯದಿಂದ ಹೊರಬಂದಿರುವ ವರದಿ ಮುಖ್ಯಮಂತ್ರಿಗಳ ಮುಖವಾಡ ಬಯಲು ಮಾಡಿದೆ. ಇಷ್ಟಾಗಿಯೂ ಅಧಿಕಾರದ ಕುರ್ಚಿಗೆ ಅಂಟಿ ಕುಳಿತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ದೊರೆತಿದ್ದ 14 ನಿವೇಶನಗಳು ಹಾಗೂ ಸಾವಿರಾರು ನಿವೇಶನಗಳ ಲೂಟಿಕೋರತನದ ಹಗರಣದ ಹಿನ್ನಲೆ ಈ ಹಿಂದೆಯೂ ದಾಖಲೆಗಳ ಆಧಾರದ ಮೇಲೆ ಸಿದ್ದರಾಮಯ್ಯ ನವರ ಪಾತ್ರವನ್ನು ಸಾಕ್ಷೀಕರಿಸುತ್ತಿತ್ತು.

 

Leave a Reply

Your email address will not be published. Required fields are marked *

error: Content is protected !!