ಉದಯವಾಹಿನಿ, ಬೆಂಗಳೂರು: ಹೊಸವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೆ ಡ್ರಗ್ಸ್ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಎರಡು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆ ಕೈಗೊಂಡು ೭ ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೭೯.೬ ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಗಳಾದ ಕುಮಾರಸ್ವಾಮಿ ಲೇಔಟ್ ನ ಫಯಾಜ್ (೨೮) ನಾಗರಬಾವಿಯ ಗೌತಮ್(೩೫) ಹಾಗೂ ಜೈಲಿನಲ್ಲಿದ್ದ ಹಮೀರ್ ಖಾನ್ ನನ್ನು ಬಂಧಿಸಿ ೭೧ ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದರೆ,ಕೊಡಿಗೇಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿ ೮.೬ ಲಕ್ಷ ಮೌಲ್ಯದ , ೮ ಕೆ.ಜಿ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕುಮಾರಸ್ವಾಮಿ ಲೇಔಟ್‌ನ ಚಂದ್ರಾನಗರದ ಮನೆಯೊಂದರಲ್ಲಿ ಮಾದಕ ವಸ್ತುಗಳನ್ನಿಲ್ಲಿಟ್ಟುಕೊಂಡು, ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕೇರಳ ಮೂಲದ ಫಯಾಜ್ ಹಾಗೂ ಗೌತಮ್ ಬಂಧಿಸಿ ಇವರಿಬ್ಬರೂ ನೀಡಿದ ಮಾಹಿತಿ ಆಧರಿಸಿ ಜೈಲಿನಲ್ಲಿದ್ದ ಹಮೀರ್ ಖಾನ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಬಂಧಿತರಿಂದ ೭೧ ಲಕ್ಷ ಮೌಲ್ಯದ ೧೫.೫ ಗ್ರಾಂ ಎಂಡಿಎಂಎ ಕ್ರಿಸ್ಟಲ್,೫೨೦ ಗ್ರಾಂ ಹೈಡ್ರೋ ಗಾಂಜಾ ,೨ ಕೆ.ಜಿ ೨೨೩ ಗ್ರಾಂ ಗಾಂಜಾ,ತೂಕದ ಯಂತ್ರ, ಮೊಬೈಲ್ ಪಡೆದುಕೊಂಡು ನಡೆಸಿದ ವಿಚಾರಣೆಯಲ್ಲಿ ಕೇರಳ ರಾಜ್ಯದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
