ಉದಯವಾಹಿನಿ, ಮೈಸೂರು: ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಶನಿವಾರ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಸಹಸ್ರಾರು ಭಕ್ತರು ಶ್ರೀಸುಬ್ರಹ್ಮಣೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು.ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿ ಇರುವ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರದ ಹಿನ್ನೆಲೆಯಲ್ಲಿ ಕಳೆದ ಬಾರಿ ಜಾತ್ರೆ ನಡೆದಿರಲಿಲ್ಲ. ಈ ಬಾರಿ ದೇವಸ್ಥಾನ ಜೀರ್ಣೋದ್ದಾರ ಪೂರ್ಣಗೊಂಡಿದ್ದರಿಂದ ಜಾತ್ರೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಹಸ್ರಾರು ಮಂದಿ ಷಷ್ಠಿ ಜಾತ್ರೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರಲ್ಲದೆ, ಮುಂಜಾನೆಯಿಂದ ತಡರಾತ್ರಿವರೆಗೆ ಮೈಸೂರು ಸೇರಿದಂತೆ ದೂರ ದೂರದ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.
ಸುಬ್ರಹ್ಮಣೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟವಧಾನ ಪೂಜೆ ನಂತರ ಹಾಲು, ಮೊಸರು, ಜೇನುತುಪ್ಪ, ಬೆಣ್ಣೆ ಅಭಿಷೇಕ ಮಾಡಲಾಯಿತು. ಕಳೆದ ರಾತ್ರಿಯೇ ಪೆÇಲೀಸ್ ಬಂದೋಬಸ್ತ್‍ನಲ್ಲಿ ಮೈಸೂರು ಅರಮನೆಯಿಂದ ತಂದು ಇಡಲಾಗಿದ್ದ ಬೆಳ್ಳಿ ನಾಗಾಭರಣವನ್ನು ತಹಸೀಲ್ದಾರ್, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸಮ್ಮುಖದಲ್ಲಿ ದೇವರಿಗೆ ಧರಿಸಿ ಅಲಂಕಾರ ಮಾಡಲಾಯಿತು.
ಬೆಳ್ಳಿ ನಾಗಾಭರಣ ಧರಿಸಿದ ಸುಬ್ರಹ್ಮಣೇಶ್ವರಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಮಹಾಮಂಗಳಾರತಿ ನಡೆದ ಬಳಿಕ 3.30ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮಹಾರಾಜರ ಕಾಲದಿಂದಲೂ ಈ ದೇವರಿಗೆ ಧರಿಸಲೆಂದು ವಿಶೇಷವಾಗಿ ಬೆಳ್ಳಿ ನಾಗಾಭರಣ ಮಾಡಿಸಲಾಗಿದ್ದು, ಅದನ್ನು ಸಂಪ್ರದಾಯದಂತೆ ಪ್ರತಿ ವರ್ಷ ಷಷ್ಠಿ ಹಬ್ಬದ ದಿನದಂದು ಧರಿಸುವುದು ವಾಡಿಕೆಯಾಗಿದೆ.
