ಉದಯವಾಹಿನಿ, ಕಲಬುರಗಿ: ಯಡ್ರಾಮಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಕಲಬುರಗಿಯಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತಯ ಮೇಲೆ ಖಾಸಗಿ ಶಾಲಾ ಶಿಕ್ಷಕ ಅತ್ಯಾಚಾರ ಎಸಗಿದ್ದನು. ಇದನ್ನು ಖಂಡಿಸಿ ಬಂಜಾರ ಮತ್ತು ಹಿಂದೂ ಸಮುದಾಯದ ಅನೇಕ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ಭಾರೀ ಗದ್ದಲ ಉಂಟಾಗಿದೆ.
ಪ್ರತಿಭಟನೆಯ ವೇಳೆ ಅತ್ಯಾಚಾರಿ ಆರೋಪಿ ಶಿಕ್ಷಕ ಹಾಜಿಮಂಗಲ್ ಗೆ ಗಲ್ಲು ಶಿಕ್ಷೆ ನೀಡುವಂತೆ ಹಾಗೂ ಸಂತ್ರಸ್ತ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ, ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಗಿದೆ. ಬಂಜಾರಾ ಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆ ವೇಳೆ ಉದ್ರಿಕ್ತರು ಅಲ್ಲಲ್ಲಿ ಕಲ್ಲು ತೂರಾಟ ಮಾಡಿದ್ದು, ಕೆಲವು ಕಾರ್‌ಗಳು, ಬೈಕ್‌ಗಳು, ಆಟೋಗಳು ಸೇರಿದಂತೆ ಅನೇಕ ಅಂಗಡಿಗಳು ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ.
