ಉದಯವಾಹಿನಿ,ಬೆಂಗಳೂರು: ಪುಸ್ತಕ ಆರೋಗ್ಯವಂತ ಸಮಾಜದ ಅನಿವಾರ್ಯ ಅಂಗ. ಹಾಗಾಗಿ ಪ್ರಕಾಶನ ರಂಗದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದರ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿ ಮಾಡಿದ ಪ್ರಕಾಶಕರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.ಶನಿವಾರ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದ ಪ್ರಕಾಶಕರ ನಿಯೋಗವನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ಪುಸ್ತಕೋದ್ಯಮದ ಮುಂದಿರುವ ಸಮಸ್ಯೆ ಹಾಗೂ ಸವಾಲುಗಳನ್ನು ವಿವರವಾಗಿ ಆಲಿಸಿದರು.ಮುಖ್ಯಮಂತ್ರಿಗಳು ಮಂಡಿಸಲು ಉದ್ದೇಶಿಸಿರುವ ಬಜೆಟ್ನಲ್ಲಿ 25 ಕೋಟಿ ರೂಗಳನ್ನು ಒದಗಿಸುವಂತೆ ನಿಯೋಗ ಮನವಿ ಮಾಡಿತು. ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್.ದೊಡ್ಡೇಗೌಡ ಅವರು ಮಾತನಾಡಿ ಇದು ಅನುಷ್ಟಾನಗೊಂಡಲ್ಲಿ ಸರ್ಕಾರ ಒದಗಿಸಿರುವ ಅನೇಕ ಭಾಗ್ಯಗಳ ಜೊತೆಗೆ ‘ಜ್ಞಾನ ಭಾಗ್ಯ’ವನ್ನೂ ಒದಗಿಸಿದಂತಾಗುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಕಡೆಗಣಿಸಲಾಗಿದ್ದು ಇದರಿಂದ ರಾಜ್ಯದ ಓದುಗರು ಜ್ಞಾನ ವಂಚಿತರಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸ್ಥಗಿತವಾಗಿರುವ ಸಗಟು ಖರೀದಿ ಯೋಜನೆಗೆ ಚಾಲನೆ ನೀಡಬೇಕು ಹಾಗೂ 500 ಪ್ರತಿಗಳನ್ನು ಕೊಳ್ಳಬೇಕು ಎಂದು ಪ್ರಕಾಶನ ನಿಯೋಗದ ಸದಸ್ಯರು ಆಗ್ರಹಿಸಿದ್ದಾರೆ.
