ಉದಯವಾಹಿನಿ, ಬೆಂಗಳೂರು: ದೇಶದ ಅನೇಕ ರಾಜ್ಯಗಳ ಸರ್ಕಾರದ ಲಾಂಛನಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯನ್ನು ಬಳಕೆ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿಯನ್ನೆ ಬಳಸುವಂತೆ ಸಿಎಂ ಸಿದ್ಧರಾಮಯ್ಯಗೆ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಪತ್ರ ಬರೆದು ಒತ್ತಾಯಿಸಿದ್ದಾರೆ.ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಪತ್ರ ಬರೆದಿದ್ದು, ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕ ಸರ್ಕಾರವೂ ವಿಶಿಷ್ಟ ಹಾಗೂ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಲಾಂಛನ ಹೊಂದಿದ್ದು, ಅದರಲ್ಲಿ ಅಶೋಕ ಸ್ಥಂಭದ ಭಾಗ ಮತ್ತು ಮೈಸೂರು ರಾಜ್ಯ ಲಾಂಛನದ ಭಾಗವನ್ನು ಒಗ್ಗೂಡಿಸಿ ರೂಪಿಸಲಾಗಿದೆ. ನಂತ್ರ ಸತ್ಯಮೇವ ಜಯತೆ ವಾಕ್ಯ ದೇವನಾಗರಿ ಲಿಪಿಯಲ್ಲಿ ಇದೆ ಎಂದಿದ್ದಾರೆ.ನಮ್ಮ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿ ಎಲ್ಲಿಯೂ ಕೂಡ ಉಪಯೋಗಿಸಿಲ್ಲ. ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಲಾಂಛನಗಳಲ್ಲಿ ಅವರ ರಾಜ್ಯ ಭಾಷೆಯಗಳ ಉಪಯೋಗ ಮಾಡಿದ್ದಾರೆ. ಇದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ಕನ್ನಡ ಲಿಪಿಯು ಇರಬೇಕು ಎಂದು ವಿವಿಧ ಕನ್ನಡ ಪರ ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ಮನವಿಯಾಗಿದೆ ಎಂದು ತಿಳಿಸಿದ್ದಾರೆ.ಕನ್ನಡ ಲಿಪಿಯಲ್ಲಿ ಸಿಗನ್ನಡಂ ಗೆಲ್ಗೆ ಎಂದು ಉಪಯೋಗಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆಯಾಗಿದೆ. ಕನ್ನಡ ಪ್ರೇಮಿಯಾಗಿರುವ ನೀವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ಸಮಿತಿ ರಚಿಸಿ ಇದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಕೋರಿದ್ದಾರೆ.
