ಉದಯವಾಹಿನಿ, ನವದೆಹಲಿ: ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಪದಾಧಿಕಾರಿಗಳ ಚುನಾವಣೆಯಲ್ಲಿ ಭಾರತದ ಮಾಜಿ ಆಟಗಾರ ಕೀರ್ತಿ ಆಜಾದ್‌ ಅವರನ್ನು ಮಣಿಸಿ ರೋಹನ್‌ ಜೇಟ್ಲಿ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್‌ ಜೇಟ್ಲಿ ಅವರ ಪುತ್ರ ರೋಹನ್‌ ಜೇಟ್ಲಿ ಅವರು 1,577 ಮತಗಳನ್ನು ಗಳಿಸಿ ಜಯಸಾಧಿಸಿದ್ದರೆ ಪ್ರತಿಸ್ಪರ್ಧಿ ಆಜಾದ್‌ ಅವರ 777 ಮತಗಳಿಗೆ ಮಾತ್ರ ಪಡೆದು ಪರಾಭವಗೊಂಡಿದ್ದಾರೆ.
2,413 ಮತಗಳು ಚಲಾವಣೆಯಾಗಿದ್ದು, ಗೆಲ್ಲಲು 1,207 ಮತಗಳು ಬೇಕಾಗಿದ್ದವು. ಕಳೆದ 2020 ರಲ್ಲಿ, ರೋಹನ್‌ ಡಿಡಿಸಿಎ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಮತ್ತು ಒಂದು ವರ್ಷದ ನಂತರ ಚುನಾವಣೆಯಲ್ಲಿ ವಕೀಲ ವಿಕಾಸ್‌‍ ಸಿಂಗ್‌ ಅವರನ್ನು ಸೋಲಿಸಿದರು.
ಮಾಜಿ ಬಿಸಿಸಿಐ ಅಧ್ಯಕ್ಷ ಸಿಕೆ ಖನ್ನಾ ಅವರ ಪುತ್ರಿ ಶಿಖಾ ಕುಮಾರ್‌ (1,246 ಮತಗಳು) ಅವರು ರಾಕೇಶ್‌ ಕುಮಾರ್‌ ಬನ್ಸಾಲ್‌ (536) ಮತ್ತು ಸುಧೀರ್‌ ಕುಮಾರ್‌ ಅಗರ್ವಾಲ್‌ (498) ಅವರನ್ನು ಸೋಲಿಸಿ ಉಪಾಧ್ಯಕ್ಷ ಸ್ಥಾನವನ್ನು ಪಡೆದರು.

ಅಶೋಕ್‌ ಶರ್ಮಾ (893) ಕಾರ್ಯದರ್ಶಿಯಾದರು, ಖಜಾಂಚಿ ಸ್ಥಾನಕ್ಕೆ ಹರೀಶ್‌ ಸಿಂಗ್ಲಾ (1328) ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಅಮಿತ್‌ ಗ್ರೋವರ್‌ (1189) ಆಯ್ಕೆಯಾದರು. ಇನ್ನುಳಿದಂತೆ ಆನಂದ್‌ ವರ್ಮಾ (985), ಮಂಜಿತ್‌ ಸಿಂಗ್‌ (1050), ನವದೀಪ್‌ ಎಂ (1034), ಶ್ಯಾಮ್‌ ಶರ್ಮಾ (1165), ತುಷಾರ್‌ ಸೈಗಲ್‌ (926), ವಿಕಾಸ್‌‍ ಕತ್ಯಾಲ್‌ (1054), ವಿಕ್ರಮ್‌ ಕೊಹ್ಲಿ (939) ನಿರ್ದೇಶಕರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!