ಉದಯವಾಹಿನಿ, ನವದೆಹಲಿ: ಬಹುನಿರೀಕ್ಷಿತ ಹಾಗೂ ಬಹುಚರ್ಚಿತ ಒಂದು ದೇಶ, ಒಂದು ಚುನಾವಣೆ ವಿವಾದಿತ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಂದು ಮಂಡಿಸಲಾಗಿದ್ದು, ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.ಬಳಿಕ ಲೋಕಸಭೆಯಲ್ಲಿ ಮತದಾನದ ಮೂಲಕ ಮಸೂದೆ ಮಂಡನೆಗೆ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ.
ಪ್ರಶ್ನೋತ್ತರ ಕಾಗದಪತ್ರಗಳ ಮಂಡನೆ ಹಾಗೂ ಇತರ ಕಲಾಪಗಳ ಬಳಿಕ ಲೋಕಸಭಾಧ್ಯಕ್ಷ ಓಂಬಿರ್ಲಾ ಸಂವಿಧಾನದ 129 ನೇ ತಿದ್ದುಪಡಿ ಅನುಸಾರ ಒಂದು ದೇಶ, ಒಂದು ಚುನಾವಣೆ ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆ-2024 ಅನ್ನು ಏಕಕಾಲಕ್ಕೆ ಮಂಡಿಸಲು ಕೇಂದ್ರ ಕಾನೂನು ಮತ್ತು ಸಾಮಾಜಿಕ ನ್ಯಾಯ ಸಚಿವ ಅರ್ಜುನ್ರಾಂ ಮೇಘ್ವಾಲ್ ಅವರಿಗೆ ಅವಕಾಶ ಮಾಡಿಕೊಟ್ಟರು.
ಈ ಮಸೂದೆ ಮಂಡನೆ ಕ್ರಮವನ್ನು ಕೇರಳದ ಆರ್ಎಸ್ಪಿ ಪಕ್ಷದ ಎನ್.ಕೆ.ಪ್ರೇಮಚಂದ್ರನ್ ವಿರೋಧಿಸಿದರು. ಚುನಾವಣಾ ವ್ಯವಸ್ಥೆ ಬದಲಾವಣೆಗಾಗಿ ಮಂಡನೆ ಮಾಡಿರುವ ಮಸೂದೆಯ ಚರ್ಚೆಗೆ ಪ್ರತ್ಯೇಕ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಓಂಬಿರ್ಲಾ, ಸಚಿವರು 2 ಮಸೂದೆಗಳನ್ನು ಪ್ರತ್ಯೇಕವಾಗಿ ಮಂಡಿಸುತ್ತಾರೆ. ಅದನ್ನು ಅಂಗೀಕರಿಸುವ ಪ್ರಕ್ರಿಯೆಗಳನ್ನು ತಾವು ಪ್ರತ್ಯೇಕವಾಗಿಯೇ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಚರ್ಚೆಯನ್ನು 2 ಮಸೂದೆಗಳನ್ನು ಒಳಗೊಂಡಂತೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
