ಉದಯವಾಹಿನಿ, ಮಂಡ್ಯ: ಹಿಂದಿ ಹೇರಿಕೆಯ ಮೂಲಕ ಕನ್ನಡ ಹಾಗೂ ಇತರ ದೇಶ ಭಾಷೆಗಳನ್ನು ದಮನಿಸುವ ಪ್ರಯತ್ನಗಳಾಗುತ್ತಿದ್ದು, ಇದನ್ನು ಪ್ರತಿಭಟಿಸದೇ ಇದ್ದರೆ ನಮ ಭಾಷೆಗಳು ಗಂಡಾಂತರಕ್ಕೆ ಸಿಲುಕಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಒದಗಿರುವ ಕಂಟಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಶ್ರೀಮಂತರ ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದಕ್ಕಾಗಿ ನಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಬೇಕಾಯಿತು ಎಂದು ಹೇಳಿದರು.
ಸಂವಿಧಾನದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿರುವುದು ನಮೆಲ್ಲರ ಜವಾಬ್ದಾರಿ ಎಂದ ಮುಖ್ಯಮಂತ್ರಿಗಳು ಮಂಡ್ಯ ನೆಲದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ಪ್ರಯತ್ನಿಸುತ್ತಿವೆ. ಸಿಹಿ ಬೆಳೆಯುವ ಜನ ಅವರನ್ನು ಒಳಗೆ ಬಿಟ್ಟುಕೊಂಡಿಲ್ಲ. ಇದಕ್ಕಾಗಿ ಅಭಿನಂದನೆಗಳು ಎಂದು ಹೇಳಿದರು.
ಈ ಸಮೇಳನ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು. ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು?, ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ಕುವೆಂಪು ವಿವರಿಸಿದ್ದಾರೆ. ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ನಮನ್ನು ದಾಸ್ಯದಲ್ಲಿ ಹೇಗೆ ಮುಳುಗಿಸಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದರು.
ಆಧುನಿಕತೆಯ ಕಾಲದಲ್ಲೂ ನಾವು ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡಿಲ್ಲ. ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರಂಗಗಳನ್ನು ವೈಚಾರಿಕ ದೃಷ್ಟಿಯಿಂದ ನೋಡದೇ ಇದ್ದರೆ ಕೇಡು ತಪ್ಪುವುದಿಲ್ಲ. ಯಾವ ಸಂಪ್ರದಾಯವೂ ಸಂಕೋಚಕ್ಕೆ ಸಿಲುಕಬಾರದು. ಸರ್ವಧರ್ಮಗಳ ಸಾರ, ಉದಾರದರ್ಶನವನ್ನು ಕಂಡು ಬಾಳನ್ನು ಕಟ್ಟಿಕೊಳ್ಳಬೇಕು. ಜಾತಿ, ಮತ, ದೇಶ, ಕಾಲಗಳ ಭೇದವಿಲ್ಲದೆ ಎಲ್ಲಾ ಮಹಾಪುರುಷರ ಜ್ಞಾನಗಂಗೆಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದು ಹೇಳಿದರು.
