ಉದಯವಾಹಿನಿ, ಮಂಡ್ಯ : ಎರಡು ಸಾವಿರ ವರ್ಷಗಳ ಇತಿಹಾಸವಿರುವ ಶ್ರೀಮಂತ ಭಾಷೆ ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಹಾಗೂ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಉದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು, ವಿದೇಶಿ ಕನ್ನಡಿಗರು ಕೈಜೋಡಿಸಬೇಕೆಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಕರೆ ನೀಡಿದ್ದಾರೆ.
ಮಂಡ್ಯದಲ್ಲಿ ಹಮಿಕೊಂಡಿರುವ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷೀಯ ಭಾಷಣದಲ್ಲಿ ಈ ವಿಷಯ ತಿಳಿಸಿದ ಅವರು, ಕನ್ನಡವು ಇಂದು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ಬೆಳೆಯುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಪೋಷಣೆ ಅತ್ಯಗತ್ಯ. ಗೂಗಲ್, ಯಾಂತ್ರಿಕ ಬುದ್ದಿಮತ್ತೆಗೂ ಶುದ್ದ ಕನ್ನಡಪ್ರೇಮ ಬರುವಂತಾಗಲಿ ಎಂದರು.
ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ ಕನ್ನಡವು ಜ್ಞಾನದ ಭಾಷೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾ ಪ್ರೇಮದ ಕೊರತೆ ಇರುವಂತೆ ಕಾಣುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು. ಕಲೆ, ನಾಟಕ, ಸಂಗೀತ ಮುಂತಾದವುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಪರಿಚಯಿಸಿಕೊಡುವ ಕೆಲಸ ಆದ್ಯತೆಯ ಮೇಲೆ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ನೂರಾರು ಸರ್ಕಾರಿ ಶಾಲೆಗಳ ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಸರ್ಕಾರ ಅವುಗಳನ್ನು ಸರಿಪಡಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಶಾಲೆ ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲದಿದ್ದರೂ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆಯಬೇಕೆಂಬ ಸಲಹೆಗಳನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣ ಭಾಷೆಯಾಗಿ, ಪಠ್ಯಕ್ರಮದಲ್ಲಿ ಇಂಗ್ಲೀಷ್ ಭಾಷೆಯನ್ನು ಒಂದು ವಿಷಯವಾಗಿ ಮಾಡಬೇಕು ಎಂದರು.
ಇದರಲ್ಲಿ ಬೆಂಗಳೂರು ಐಟಿ-ಬಿಟಿ ಸಿಟಿ ಎಂದು ಪ್ರಖ್ಯಾತವಾಗಿದೆ. ಯಾವ ರಾಜ್ಯದ, ಯಾವ ಭಾಷೆಯ ಜನರಾದರೂ ದೇಶದಲ್ಲಿ ಎಲ್ಲೂ ಬೇಕಾದರೂ ನೆಲೆಸಬಹುದು. ಆದರೆ ನೆಲೆಯೂರುವ ನೆಲದ ಬಗ್ಗೆ ಗೌರವ ಹೊಂದಿರಬೇಕು ಎಂದರು.
