ಉದಯವಾಹಿನಿ, ಬೆಂಗಳೂರು : ರಾಜ್ಯದ 5 ಪ್ರಮುಖ ನಗರಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ನಗರ ಮಾಡುವುದಾಗಿ ಮತ್ತು ಈ ವರ್ಷ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ನೆರವಿನಿಂದ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಬೆಂಗಳೂರಿನಲ್ಲಿಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಪ್ರಧಾನ ಸಮಾರಂಭ ಉದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಈ ವರ್ಷದ ಪರಿಸರ ದಿನದ ಧ್ಯೇಯ ವಾಕ್ಯ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರ ಎಂಬುದಾಗಿದ್ದು, ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ, ದಾಸ್ತಾನು ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವ, ಪ್ಲಾಸ್ಟಿಕ್ ಅನ್ನು ಘನ ತ್ಯಾಜ್ಯದಿಂದ ಬೇರ್ಪಡಿಸಿ ಮರು ಬಳಕೆ ಮಾಡುವ, ಪ್ಲಾಸ್ಟಿಕ್ ಮರು ಬಳಕೆಯ ಕ್ಷೇತ್ರದಲ್ಲಿ ನವೋದ್ಯಮಗಳನ್ನು ಉತ್ತೇಜಿಸುವ, ಖಾಸಗಿ ಸಂಸ್ಥೆಗಳು, ಉದ್ದಿಮೆಗಳ ಸಹಯೋಗದಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಹಸಿರು ನಿಧಿ ಸ್ಥಾಪಿಸಿ ಈ ಎಲ್ಲ ಉಪಕ್ರಮಗಳನ್ನು ಉತ್ತೇಜಿಸುವ ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.ಆಸ್ಪತ್ರೆ ತ್ಯಾಜ್ಯ, ಇ- ತ್ಯಾಜ್ಯ, ಏಕ ಬಳಕೆ ಪ್ಲಾಸ್ಟಿಕ್ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದ್ದು, ಇದು ಪರಿಸರಕ್ಕೆ ಮತ್ತು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಬಳಕೆ ಮಾಡಿದ ಆಯಿಲ್, ಆಸ್ಪತ್ರೆ ತ್ಯಾಜ್ಯ, ಇ-ತ್ಯಾಜ್ಯ ವಿಲೇವಾರಿಯ ವ್ಯವಸ್ಥೆಯ ಮೇಲೆ ನಿಗಾ ಇಡಲು ಕ್ರಮ ವಹಿಸಲಾಗುವುದು ಎಂದರು.
