ಉದಯವಾಹಿನಿ, ಮಂಡ್ಯ : ನಗರ ಬಳಿಯ ಚಿಕ್ಕಮಂಡ್ಯದ ದಶಪಥ ಹೆದ್ದಾರಿಯಲ್ಲಿ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಸೋಮವಾರ ಸಂಜೆ ಜರುಗಿದೆ.ಗಾಯಗೊಂಡ ವ್ಯಕ್ತಿಗಳನ್ನು ಬೆಂಗಳೂರು ಮೂಲದ ಶ್ರೀಕಾಂತ್, ಕೃಷ್ಣನ್, ಮಂಜುನಾಥ್, ಅರ್ಜುನ್, ಮೂರ್ತಿ ಎಂದು ತಿಳಿದುಬಂದಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬೆಂಗಳೂರಿನಿಂದ ಮೈಸೂರಿಗೆ ಸೋಮವಾರ ಸಂಜೆ ಮಂಡ್ಯ ಬೈಪಾಸ್ ರಸ್ತೆಯಲ್ಲಿ ವೇಗವಾಗಿ ತೆರಳುವಾಗ ಇದ್ದಕ್ಕಿದ್ದಂತೆ ಕಾರಿನ ಟೈರ್ ಸ್ಪೋಟಗೊಂಡಿದೆ. ಇದರಿಂದ ಕಾರು 100 ಮೀಟರ್ ಗೂ ದೂರು ಪಲ್ಟಿ ಹೊಡೆದುಕೊಂಡು ಹೋಗಿ ಮಗುಚಿ ಬಿದ್ದಿದ್ದು ಇದರಿಂದ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದಾರೆ.ತಕ್ಷಣವೇ ಸ್ಥಳೀಯರು ಸೇರಿದಂತೆ ಹೆದ್ದಾರಿ ವಾಹನ ಸವಾರರು ಗಾಯಗೊಂಡವರನ್ನು ಕಾರಿನಿಂದ ಹೊರ ತೆಗೆದು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತದಿಂದ ಹೆದ್ದಾರಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಬಳಿಕ ರಸ್ತೆಯಿಂದ ಕಾರನ್ನು ಪೊಲೀಸರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
