ಉದಯವಾಹಿನಿ, ಹುಣಸಗಿ: ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಡಿ. 27ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಅನಾವಣ ಸಮಾರಂಭಕ್ಕೆ ಸ್ವಾತಂತ್ರ್ಯ, ಹೋರಾಟಗಾರ ಸಂಗಪ್ಪ ಮಂಟೆ ಅವರಿಗೆ ಅಧಿಕೃತ ಆಹ್ವಾನ ಬಂದಿದೆ.
ಈ ಕುರಿತು ಸರ್ಕಾರದಿಂದ ಪತ್ರ ಬಂದಿದ್ದು, ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪತ್ರ ಬರೆಯಲಾಗಿದೆ.
ಕುಲಕಸುಬು ನೇಕಾರಿಕೆ ವೃತ್ತಿಯ ಜೊತೆಗೆ ಹೈದರಾಬಾದ್ ಕರ್ನಾಟಕ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರಲ್ಲಿ ಸಂಗಪ್ಪ ಮಂಟೆ ಒಬ್ಬರಾಗಿದ್ದರು. ‘ಈ ಪತ್ರ ಬಂದಿದ್ದು, ಅತ್ಯಂತ ಖುಷಿ ತಂದಿದೆ. ಆರೋಗ್ಯ ಚೆನ್ನಾಗಿ ಇದ್ದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪತ್ರಿಕೆಯೊಂದಿಗೆ ಮಾತನಾಡುತ್ತಾ ಮಂಟೆ ಖುಷಿ ಹಂಚಿಕೊಂಡರು.
