ಉದಯವಾಹಿನಿ, ಸಂತೇಬೆನ್ನೂರು: ಉತ್ತಮ ಮಳೆ ಹಾಗೂ ಸಾಸ್ಯೆಹಳ್ಳಿ ಏತ ನೀರಾವರಿ ಯೋಜನೆ ಅಡಿ ತುಂಗಭದ್ರಾ ನದಿ ನೀರು ಸತತವಾಗಿ ಹರಿದಿದ್ದರಿಂದ ಸಮೀಪದ ಚಿಕ್ಕಬೆನ್ನೂರು ಕೆರೆ ತುಂಬಿ ಕೋಡಿಯಲ್ಲಿ ನೀರು ಹೊರ ಚೆಲ್ಲುತ್ತಿದೆ.
ಕೆರೆ ಮೈದುಂಬಿದ್ದು, ಪ್ರಯಾಣಿಕರನ್ನು ಸೆಳೆಯುತ್ತಿದೆ. ಕೆಲ ವರ್ಷಗಳ ಹಿಂದೆ ಧರ್ಮಸ್ಥಳ ಸಂಘದ ವತಿಯಿಂದ ₹ 10 ಲಕ್ಷ ವೆಚ್ಚದಲ್ಲಿ ಕೆರೆಯಲ್ಲಿನ ಹೂಳು ತೆಗೆಯಲಾಗಿತ್ತು.
ನೀರು ಸಂಗ್ರಹ ಸಾಮರ್ಥ್ಯ ವೃದ್ಧಿಯಾಗಿತ್ತು. 2022ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆರೆ ತುಂಬಿತ್ತು 2023ರಲ್ಲಿ ಮಳೆ ಕೊರತೆಯಿಂದ ಕೆರೆ ಬರಿದಾಗಿತ್ತು. ಈಗ ಕೆರೆ ತುಂಬಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆರೆಯಲ್ಲಿ ಮುಳುಗಿದ ರುದ್ರಭೂಮಿ: ಕೆರೆ ಅಂಚಿನಲ್ಲಿದ್ದ ರುದ್ರಭೂಮಿ ನೀರಿನಲ್ಲಿ ಮುಳುಗಿದೆ. ಅಂತ್ಯಕ್ರಿಯೆ ನಡೆಸಲು ಜಾಗ ಇಲ್ಲದಂತಾಗಿದೆ. ಶೀಘ್ರದಲ್ಲಿ ಬದಲಿ ನಿವೇಶನ ಹುಡಕಿ ರುದ್ರಭೂಮಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
