ಉದಯವಾಹಿನಿ, ಬೆಂಗಳೂರು: ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಅವರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸುವ ಸಲುವಾಗಿ ಬಿಜೆಪಿ ಅವರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗರಿಗೆ ಭಾರಿ ಥ್ರೆಟ್ ಆಗಿ ಪರಿಣಮಿಸಿದ್ದಾರೆ. ಏಕೆಂದರೆ ಬಿಜೆಪಿಗರ ಎಲ್ಲ ಭ್ರಷ್ಟಾಚಾರ, ಅನಾಚಾರಗಳನ್ನು ಅವರು ಬಯಲಿಗೆಳೆದಿದ್ದಾರೆ. ಮಾತ್ರವಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸಲು ಪ್ರಿಯಾಂಕ್ ಖರ್ಗೆ ಅವರು ಹೋರಾಟ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅವರ ವಿರುದ್ಧ ಮುಗಿ ಬಿದ್ದಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿ ಕಾರಿದ್ದಾರೆ ಪಿಎಸ್‌ಐ ಹಗರಣ, ೪೦ % ಕಮೀಷನ್, ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ ಹೀಗೆ ಎಲ್ಲವನ್ನೂ ಬಯಲಿಗೆಳೆದು, ಅವುಗಳನ್ನು ತನಿಖೆಯಾಗುವಂತೆ ಮಾಡಿದರು. ಮಾತ್ರವಲ್ಲಶಿಕ್ಷೆಯಾಗುವುದಕ್ಕೆ ಕಾರಣರಾಗಿದ್ದಾರೆ. ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಪ್ರತಿ ಭ್ರಷ್ಟಾಚಾರವನ್ನೂ ಅಂಕಿ ಅಂಶ, ದಾಖಲೆ ಸಹಿತ ಬೀದಿಗೆ ತಂದರು. ಮತ್ತು ಪ್ರಬಲವಾಗಿ ಹೋರಾಟ ಮಾಡಿದವರು. ಹಾಗಾಗಿ ಅನಗತ್ಯವಾಗಿ ಈಗ ಸಚಿನ್ ಆತ್ಮಹತ್ಯೆ ಪ್ರಕರಣಗಳನ್ನು ಅವರ ತಲೆಗೆ ಕಟ್ಟುವ ಪ್ರಯತ್ನವನ್ನು ಅನಗತ್ಯವಾಗಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
