ಉದಯವಾಹಿನಿ, ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ರಾಜ್ಯದ ನಾಲ್ಕು ನಿಗಮಗಳಲ್ಲಿ ಏರಿಕೆಯಾಗಿದ್ದ ಬಸ್ ದರ ಪ್ರಯಾಣ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಮಧ್ಯರಾತ್ರಿ 11 ಗಂಟೆಯಿಂದ ನೂತನ ದರ ಪರಿಷ್ಕರಣೆಯಾಗಿದ್ದು, ಭಾನುವಾರದಿಂದ ಹೊಸ ದರ ಜಾರಿಗೆ ಬರಲಿದೆ. ಕೆಎಸ್ಆರ್ಟಿಸಿ ಕಲ್ಯಾಣ ಕರ್ನಾಟಕ, ವಾಯುವ್ಯ ಮತ್ತು ಬಿಎಂಟಿಸಿಗಳಲ್ಲಿ ಭಾನುವಾರದಿಂದಲೇ ಹೊಸ ದರ ಅನ್ವಯವಾಗಲಿದ್ದು, ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗವಾಗಲಿದೆ. ಹಾಲಿ ಇದ್ದ ದರಕ್ಕೆ 15% ಏರಿಕೆಯಾಗಲಿದ್ದು, ಶಕ್ತಿ ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಲಾಭಕ್ಕಿಂತ ಹೆಚ್ಚಾಗಿ ಕಡೆಪಕ್ಷ ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಈವರೆಗೂ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು. ಇನ್ನು ಮುಂದೆ ಈ ದರವು 197 ರೂ.ಗೆ ಹೆಚ್ಚಳವಾಗಲಿದೆ. ಇದೇ ರೀತಿ ಬೆಂಗಳೂರಿನಿಂದ ಹಾಸನಕ್ಕೆ 238 ರೂ. ಇದ್ದ ದರವು 274ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಈ ಮೊದಲು 385 ರೂ. ಇತ್ತು. ನೂತನ ಪರಿಷ್ಕರಣೆ ಪರಿಣಾಮ 441 ರೂ.ಗೆ ಅದೇ ರೀತಿ ಬೆಂಗಳೂರು-ಶಿವಮೊಗ್ಗ ನಡುವೆ 375 ರೂ. ಇದ್ದ ಪ್ರಯಾಣ ದರ ಈಗ 427 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ದಾವಣಗೆರೆ ನಡುವೆ 375 ರೂ. ಇದ್ದ ದರವು ಈಗ 445ಕ್ಕೆ ಏರಿಕೆಯಾದರೆ, ಬೆಂಗಳೂರು-ಚಿಕ್ಕಮಗಳೂರು ನಡುವೆ 350 ರೂ. ಇದ್ದ 390ಕ್ಕೆ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನಾಲ್ಕು ನಿಗಮಗಳ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಹೊರತುಪಡಿಸಿದರೆ ಉಳಿದ ಎರಡು ನಿಗಮಗಳು ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನ ನೀಡಲು ಪರದಾಡಬೇಕಾದ ಸ್ಥಿತಿ ಇತ್ತು.
