ಉದಯವಾಹಿನಿ, ಹುಣಸೂರು: ಇಪ್ಪತೈದು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕೊಲೆ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ಮರು ತನಿಖೆಗೆ ನಡೆಸುವಂತೆ ಆದೇಶಿಸಿ ಮಹತ್ವದ ತೀರ್ಪು ನೀಡಿದೆ.ನಗರದ ದಾವಣಿ ಬೀದಿಯ ನಿವಾಸಿ ರಾಜೇಗೌಡರ ಪತ್ನಿ ಪುಪ್ಪಲತಾರನ್ನು ಕಮಲಬಾಯಿ, ವಿಜಯ್, ಮಂಜು, ಜಯಣ್ಣ, ಸೋಮೇಶ್, ಮಹದೇವಮ್ಮ ಹಾಗೂ ಬಡ್ಡಿ ಯಶೋಧಮ್ಮ ಎಂಬುವವರು ಅಪಹರಣ ಮಾಡಿ ಮಾನವ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಿ, ಸದರಿ ಕೃತ್ಯಕ್ಕೆ ಸಹಾಯ ಮಾಡಿರುವ ಹೆಚ್.ಕೆ.ಕೃಷ್ಣ, ಹೆಚ್.ಕೆ.ಕುಮಾರ, ಆನಂತ, ಸುನೀತ, ಈಶ್ವರ, ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮತ್ತು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಪ್ರಕರಣ ದಾಖಲಿಸಲು ಪತಿ ರಾಜೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಸೆ.11, 2000ರಂದು ದೂರು ನೀಡಿರುತ್ತಾರೆ.
ಆದರೆ ದೂರು ಸ್ವೀಕರಿಸಿದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುತ್ತಾರೆ. ಈ ವೇಳೆ ಡಿ.1ರಂದು ರಾಜೇಗೌಡರ ಜಮೀನು ಪಕ್ಕದಲ್ಲಿರುವ ಸರ್ವೆ ನಂ 116ರ ಕಬ್ಬಿನ ಗದ್ದೆಯಲ್ಲಿ ಮೃತ ಮಹಿಳೆಯ ಕಳೇಬರಹ ಪತ್ತೆಯಾಗುತ್ತದೆ.
ಸಿಕ್ಕಿರುವ ಕಳೆಬರಹವು ರಾಜೇಗೌಡರ ಪತ್ನಿ ಪುಪ್ಪಲತಾಳದೇ ಎಂದು ಪರಿಗಣಿಸಿದ ಪೊಲೀಸರು ಪತಿ ರಾಜೇಗೌಡ, ಮೈದುನ ಭೈರೇಗೌಡ ಹಾಗೂ ನಿತ್ಯಾನಂದ ಎಂಬುವವರೇ ಪುಪ್ಪಲತಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುತ್ತಾರೆ.
