ಉದಯವಾಹಿನಿ, ಹಿರೇಕೆರೂರು: ಹಾವೇರಿ ಜಿಲ್ಲೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಜ್ಞನ ನಾಡು ಹಿರೇಕೆರೂರು ಸಿದ್ಧವಾಗಿದ್ದು, ಪಟ್ಟಣದ ಪೊಲೀಸ್ ಮೈದಾನದಲ್ಲಿ ಸಮ್ಮೇಳನದ ಮುನ್ನಾದಿನವಾದ ಗುರುವಾರ ಅಂತಿಮ ಸಿದ್ಧತೆಗಳು ಭರದಿಂದ ನಡೆದವು. ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜಿಲ್ಲಾ ಘಟಕ ಹಾಗೂ ಹಿರೇಕೆರೂರು ತಾಲ್ಲೂಕು ಘಟಕದಿಂದ ಜನವರಿ 10 ಹಾಗೂ 11ರಂದು ಸಮ್ಮೇಳನವನ್ನು ಆಯೋಜಿಸಲಾಗಿದೆ. ರಟ್ಟಿಹಳ್ಳಿ ತಾಲ್ಲೂಕಿನ ಜನರೂ ಸಮ್ಮೇಳನಕ್ಕೆ ಕೈ ಜೋಡಿಸಿದ್ದಾರೆ. ಜಿಲ್ಲೆಯ ಕನ್ನಡ ಅಭಿಮಾನಿಗಳ ಸಹಕಾರದೊಂದಿಗೆ ಈ ಬಾರಿ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಸಂಘಟಕರು ಸಿದ್ರತೆ ಮಾಡಿಕೊಂಡಿದ್ದಾರೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಆಯ್ಕೆಯಾಗಿರುವುದು ವಿಶೇಷವಾಗಿದೆ. ಹಿರೇಕೆರೂರಿನ ಪೊಲೀಸ್ ಮೈದಾನದಲ್ಲಿ ‘ವರಕವಿ ಸರ್ವಜ್ಞ ಹಾಗೂ ಶಾಂತಕವಿ’ ಹೆಸರಿನಲ್ಲಿ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ.

ಧ್ವಜಾರೋಹಣ, ಮೆರವಣಿಗೆ: ಜ. 10ರಂದು ಬೆಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜ, ಪರಿಷತ್ ಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಲಿದೆ. ಇದಾದ ನಂತರ, ಬೆಳಿಗ್ಗೆ 8.30 ಗಂಟೆಗೆ ಬಿ.ಜಿ. ಶಂಕರರಾವ್ ವೃತ್ತದಿಂದ ಸಭಾ ಮಂಟಪದವರೆಗೆ ಸಮ್ಮೇಳನಾಧ್ಯಕ್ಷರಾದ ಸಂಕಮ್ಮ ಸಂಕಣ್ಣನವರ ಅವರ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಕಲಾ ತಂಡಗಳು, ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯುದ್ದಕ್ಕೂ ಕನ್ನಡದ ಜಾಗೃತಿ ಮೂಡಿಸಲು ಕಸಾಪ ಪದಾಧಿಕಾರಿಗಳು ಸಜ್ಜಾಗಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ಸಮ್ಮೇಳನವನ್ನು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಸಿ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ನಿಲುಗಡೆಗಾಗಿ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!