ಉದಯವಾಹಿನಿ, ಬೆಂಗಳೂರು: ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಆಧರಿಸಿ 2025-26ನೇ ಸಾಲಿನ ಸಮಗ್ರ ಸಹಭಾಗಿತ್ಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿರುವ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 309(ಬಿ) ಅಡಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮುಂದಿನ ಐದು ವರ್ಷದ ದೂರದೃಷ್ಟಿ ಯೋಜನೆಯನ್ನು ಗ್ರಾಮ ಯೋಜನಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಯೋಜನಾ ಸಮಿತಿಗಳ ಸಹಕಾರದೊಂದಿಗೆ ಸಿದ್ಧಪಡಿಸಿದೆ. ದೂರದೃಷ್ಟಿ ಯೋಜನೆಯಲ್ಲಿ 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು ಅದಕ್ಕೆ ಪೂರಕವಾದ ಎಲ್ಲಾ ಚಟುವಟಿಕೆಗಳನ್ನು ಯೋಜನೆಯಲ್ಲಿ ಗುರುತಿಸಿ 2023-24ನೇ ಸಾಲಿನಿಂದ 2028-29ನೇ ಸಾಲಿನವರೆಗೆ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
