ಉದಯವಾಹಿನಿ, ಕೊಪ್ಪಳ: ಸೂರ್ಯ ತನ್ನ ನಿತ್ಯದ ಕೆಲಸ ಮುಗಿಸಿ ಮರೆಯಾಗುತ್ತಿದ್ದಂತೆ ಅಪಾರ ಸಂಖ್ಯೆಯ ಜನರ ಬದುಕಿಗೆ ಬೆಳಕು ನೀಡಿದ ಗವಿಸಿದ್ಧೇಶ್ವರರು ಎನ್ನುವ ಸೂರ್ಯ ಕೂಡ ಕೆಂಬಣ್ಣದ ಹೊಳಪಿನಲ್ಲಿ ರಥೋತ್ಸವದ ಹಿರಿಮೆಯಲ್ಲಿ ತೇರಿನಲ್ಲಿ ಸಾಗುತ್ತಿದ್ದ ಚಿತ್ರಣ ಕಂಡುಬಂದಿತು. ಕೆಂಬಣ್ಣದ ಹೊಳಪು, ಜನರ ಸಂಗಮ, ಸಂಭ್ರಮ, ಗವಿಸಿದ್ದೇಶ್ವರ ಮಹಾರಥೋತ್ಸವವನ್ನು ಕಣ್ಣುಂಬಿಕೊಳ್ಳುವ ಖುಷಿಯಲ್ಲಿ ಮಿಂದೆದ್ದ ಲಕ್ಷಾಂತರ ಜನ ಬುಧವಾರ ನಡೆದ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡರು.
ಉತ್ತರ ಭಾರತದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದ್ದು ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾದ ಗವಿಸಿದ್ಧೇಶ್ವರ ಜಾತ್ರೆಯ ಮಹಾರಥೋತ್ಸವವೂ ವಿಜೃಂಭಣೆಯಿಂದ ನೆರವೇರಿತು. ಹೆಸರಾಂತ ಹಿಂದೂಸ್ತಾನಿ ಗಾಯಕ ಧಾರವಾಡದ ಪಂಡಿತ್ ಎಂ. ವೆಂಕಟೇಶ ಕುಮಾರ್ ಚಾಲನೆ ನೀಡಿದ ಬಳಿಕ ಗವಿಮಠದ ಮುಂಭಾಗದಲ್ಲಿರುವ ಆವರಣದಿಂದ ಪಾದಗಟ್ಟೆ ತನಕ ತೇರು ಎಳೆಯಲಾಯಿತು.
ಮಠಕ್ಕೆ ಅನೇಕ ವಯಸ್ಸಾದವರು, ಅನಾರೋಗ್ಯ ಸಮಸ್ಯೆ ಇರುವವರು ಬಂದಿದ್ದರು. ಅವರಿಗೆ ಗವಿಸಿದ್ದೇಶ್ವರ ಮಠದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಸ್ವಯಂ ಸೇವಕರು ಕೈ ಹಿಡಿದು ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದ ಚಿತ್ರಣ ಕಂಡುಬಂದಿತು. ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಮಠದ ಆವರಣ ನೋಡುವುದೇ ಕಣ್ಣಿಗೆ ಹಬ್ಬದಂತಿದೆ. ವಿದ್ಯುತ್ ದೀಪಗಳ ಬೆಳಕಿನಲ್ಲಿ ಭಕ್ತರು ಸೆಲ್ಪಿ ತೆಗೆದುಕೊಳ್ಳುತ್ತಿರುವುದು, ಕೈಲಾಸ ಮಂಟಪಕ್ಕೆ ತೆರಳುತ್ತಿರುವುದು, ತಂಡೋಪತಂಡವಾಗಿ ಬಂದು ಭಕ್ತಿ ಸಮರ್ಪಿಸುತ್ತಿರುವ ಚಿತ್ರಣ ಸಾಮಾನ್ಯವಾಗಿತ್ತು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
