ಉದಯವಾಹಿನಿ, ಶ್ರೀನಿವಾಸಪುರ : ಸರ್ವೇ ಮಾಡಿ ಎಂದು ನಾನೇ ಅರ್ಜಿ ಹಾಕಿದ್ದೆ ಈಗ ನೀವು ಬಂದಿದ್ದೀರ ನಾನ್ಯಾಕೆ ಇದಕ್ಕೆ ಅಡ್ಡಿ ಮಾಡಲಿ ಎಂದು ಮಾಜಿ ಸ್ಪೀಕರ್ ರಮೇಶಕುಮಾರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ತಾಲೂಕಿನ ರಾಯಲ್ಪಾಡು ಹೋಬಳಿ ಹೊಸಹುಡ್ಯ ಕಂದಾಯ ವೃತ್ತದ ಸರ್ವೇ ನಂ.೧ ಮತ್ತು ೨ ರಲ್ಲಿನ ೬೧.೩೯ ಎಕರೆ ಜಿನಗಲಕುಂಟೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಆರೋಪ ಪ್ರಕರಣದ ಹಿನ್ನಲೆಯಲ್ಲಿ ಬುಧವಾರ ಸರ್ವೇ ಕಾರ್ಯ ಮಾಡಲು ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಬಂದಾಗ ಅವರಿಗೆ ಹೇಳಿದರು.
ಸ್ಥಳದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ವತಃ ಇದ್ದು ನೀವು ಮಾಡುವ ಸರ್ವೇ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
೨೦೦೨ ರಲ್ಲಿ ಹೈಕೋರ್ಟ್‌ನಲ್ಲಿ ಜಂಟಿ ಸರ್ವೇ ಮಾಡಿ ಜಾಗ ಗುರುತಿಸಿ ಕೊಡುವಂತೆ ನಾನೇ ಮನವಿ ಮಾಡಿದ್ದೇನೆ, ನನಗೆ ಒಂದು ಇಂಚು ಅರಣ್ಯ ಭೂಮಿ ಬೇಡ, ನೀವು ಸರ್ವೇ ಮಾಡಿ ಜಾಗ ಗುರುತಿಸಿ ಎಂದು ರಮೇಶ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಹೈಕೋರ್ಟ್ ಆದೇಶದಂತೆ ಜಂಟಿ ಸರ್ವೇ ಕಾರ್ಯವನ್ನ ಮಾಡಲಾಗುತ್ತಿದೆ. ಈಗಾಗಲೇ ನಾಲ್ಕು ತಂಡಗಳಾಗಿ ಸರ್ವೇ ಕಾರ್ಯ ಮಾಡಲಾಗುತ್ತಿದೆ. ಒಂದು ಸರ್ವೇ ಟೀಂ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳನ್ನ ಗುರುತಿಸಲಿದೆ.
ರೋವರ್ ಇನ್ಸ್ಟ್ರೂ ಮೆಂಟ್ ಮೂಲಕ ಗಡಿಗಳನ್ನ ಕ್ಯಾಪ್ಚರ್ ಮಾಡಲಾಗುತ್ತದೆ.ನಾಲ್ಕು ಗಡಿಗಳಲ್ಲಿ ರೋವರ್ ಮೂಲಕ ಕ್ಯಾಪ್ಚರ್ ಮಾಡಿ ಸರ್ವೇ ರೀಡಿಂಗ್ ಮಾಡಲಾಗುತ್ತದೆ. ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯ ಭೂಮಿ ಸರ್ವೇ. ಆದಾದ ಬಳಿಕ ಅರಣ್ಯ ಗಡಿ ಗುರುತಿಸಲಾಗುವುದು. ಇದು ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದೆ.ಲ್ಯಾಂಡ್ ಪಾರ್ಸಲ್ ಸರ್ವೇ ಮಾಡಲಾಗುವುದು ಎಂದರು.
