ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್‌ಗೆ ಅಂಬೇಡ್ಕರರ ಬಗ್ಗೆ ಗೌರವವೂ ಇಲ್ಲ, ದೇಶದ ಸಂವಿಧಾನದ ಮೇಲೆ ನಂಬಿಕೆಯೂ ಇಲ್ಲ. ದೀನ, ದಲಿತರ ಏಳ್ಗೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ BJP ಬಹುಮತದಿಂದ ಗೆಲ್ಲುವುದನ್ನು ಕಾಂಗ್ರೆಸ್ಸಿಗರ ಸುಳ್ಳು ಪೊಳ್ಳು ಭಾಷಣಗಳಿಂದ ತಪ್ಪಿಸಲು ಸಾಧ್ಯವಿಲ್ಲ ಎಂಬುದಾಗಿ ಮಾಜಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ವಾಗ್ಧಾಳಿ ನಡೆಸಿದ್ದಾರೆ.ಸಂವಿಧಾನ ಎಂಬ ಪವಿತ್ರ ಪದ ಬಳಸಿಕೊಂಡು ಜನತೆಯನ್ನು ತಪ್ಪು ದಾರಿಗೆಳೆಯುವ ವಿಫಲ ಯತ್ನ ನಡೆಸುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ, ಡಾ.ಬಿಆರ್ ಅಂಬೇಡ್ಕರ್ ಅವರ ವಿರುದ್ಧವೇ ಪಿತೂರಿ ನಡೆಸಿ ಚುನಾವಣೆಯಲ್ಲಿ ಸೋಲಿಸಿದವರು ಯಾರು? ಸಂವಿಧಾನ ಶಿಲ್ಪಿಗೆ ನಿಜವಾದ ಗೌರವ ನೀಡಿದವರು ಯಾರು? ಬನ್ನಿ, ಬಹಿರಂಗ ಚರ್ಚೆ ನಡೆಸೋಣ ಎಂಬುದಾಗಿ ಸವಾಲ್ ಎಸೆದಿದ್ದಾರೆ.ಅಂಬೇಡ್ಕರ್ ಅವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸದ, ಅವರು ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ರತ್ನ ನೀಡಿ ಗೌರವಿಸುವ ಸೌಜನ್ಯವನ್ನೂ ತೋರದ ಪಕ್ಷ ನಿಮ್ಮದೇ ಅಲ್ಲವೇ? ಸಿದ್ದರಾಮಯ್ಯ ಅವರೇ… ಸಂವಿಧಾನ ಶಿಲ್ಪಿಗೆ ಗೌರವ ನೀಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಂಡ ಒಂದೇ ಒಂದು ನಿದರ್ಶನ ಇದ್ದರೆ ದಯವಿಟ್ಟು ತಿಳಿಸಿ ಎಂದು ಕೇಳಿದ್ದಾರೆ.ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷವನ್ನು 2014 ಹಾಗೂ 2019ರ ಚುನಾವಣೆಯಲ್ಲಿ ದೇಶದ ಜನತೆ ತುರ್ತು ನಿಘಾ ಘಟಕದಲ್ಲಿ ಇಟ್ಟಿದ್ದಾರೆ ಎಂದು ನಾವು ಹೇಳುವುದಿಲ್ಲ. ದೇಶದ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿಗೆ ಗೌರವ ನೀಡುವುದು ಆದ್ಯ ಕರ್ತವ್ಯ ಎಂದು ಪಾಲಿಸಿಕೊಂಡು ಬಂದಿರುವ ಪಕ್ಷ ಬಿಜೆಪಿ ಎಂದು ಹೇಳಿದ್ದಾರೆ.ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲು ಕಾಂಗ್ರೆಸ್ಸೇತರ ಸರ್ಕಾರವೇ ಬರಬೇಕಾಯಿತು. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ‘ಸಂವಿಧಾನ ದಿನ’ ಆಚರಣೆ ಪ್ರಾರಂಭಿಸಲಾಯಿತು, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ‘ಸ್ಮೃತಿ ಸ್ಥಳ’ಗಳಾಗಿ ಪರಿವರ್ತಿಸಲಾಯಿತು ಎಂದು ತಿಳಿಸಿದ್ದಾರೆ.
