ಉದಯವಾಹಿನಿ,ಚಿಂತಾಮಣಿ: ‘ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳಿಗಾಗಿ ರೂಪಿಸಲಾಗಿದ್ದ ಅಂಬೇಡ್ಕರ್ ಭವನವನ್ನು ಮದುವೆ ಮಂಟಪವನ್ನಾಗಿ ನಿರ್ಮಿಸಲಾಗಿದೆ. ಆದರೆ, ಅದಕ್ಕೂ ಅಗತ್ಯ ಸೌಲಭ್ಯಗಳಿಲ್ಲ. ಈ ಕಟ್ಟಡ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು, ಸೌಲಭ್ಯಗಳುಳ್ಳ ಭವನವೂ ಆಗಲಿಲ್ಲ.ಮದುವೆ ಮಂಟಪವೂ ಆಗಲಿಲ್ಲ’ ಹೀಗೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಸ್ಥಳಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿದರು.ನಗರಸಭೆಯಿಂದ ಕೊಟ್ಟಿರುವ ನಿವೇಶನದ ಗಡಿಯನ್ನು ಗುರುತಿಸಲಾಗಿಲ್ಲ. ಕೀ ನಕ್ಷೆ ತಯಾರಿಸಿಲ್ಲ. ಯಾವುದೇ ಮುನ್ನೋಟವಿಲ್ಲದೆ, ನಿರ್ದಿಷ್ಟ ಗುರಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ. ನನ್ನ ಪರಿಕಲ್ಪನೆ ಬೇರೆಯಾಗಿತ್ತು. ಯಾರು ಇದರ ಬಗ್ಗೆ ಗಮನಹರಿಸಿಲ್ಲ. ಸಾಧ್ಯವಾದಷ್ಟು ಬದಲಾವಣೆ ವಿನ್ಯಾಸವನ್ನು ತಯಾರಿಸಲು ತಜ್ಞರಿಗೆ ಒಪ್ಪಿಸಿ ಪರ್ಯಾಯ ನಕ್ಷೆ ತಯಾರಿಸಿ ಸಂಘಟನೆಗಳ ಮುಖಂಡರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.ಅಂಬೇಡ್ಕರ್ ಭವನ ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರವಾಗಬೇಕು. ಅಂಬೇಡ್ಕರ್ ಗ್ರಂಥಾಲಯ, ಅಧ್ಯಯನ ಕೇಂದ್ರ ಎನ್ನುವುದು ಗುರಿಯಾಗಬೇಕು. ನಾಡಿನ ಕಲೆ, ಸಂಸ್ಕೃತಿ ಭಾಷೆ ಮತ್ತು ಇತರೆ ಚಟುವಟಿಕೆಗಳಿಗೆ ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡುವ ಚಿಂತನೆ ಮಾಡಿದ್ದೆ ಎಂದರು.
