ಉದಯವಾಹಿನಿ, ಗದಗ: ಕಾಮಣ್ಣನ ಉತ್ಸವ ಮುಗಿಸಿ ಬರುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು, 8 ಜನರಿಗೆ ಗಾಯವಾದ ಘಟನೆ ಗದಗ ತಾಲೂಕಿನ ಹರ್ತಿ ಬಳಿ ನಡೆದಿದೆ.

ಮುತ್ತಪ್ಪ ಸುಟಗೇರಿ (35), ನಿಂಗಪ್ಪ ಯಳವತ್ತಿ (36) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನುಳಿದ 8 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಹಾಗೂ ಗಾಯಾಳುಗಳು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳು. ಗೋಜನೂರು ಕಾಮಣ್ಣ ಉತ್ಸವ ಡಿಜೆ ಮೆರವಣಿಗೆ ನೋಡಲು 10 ಜನ ಹೋಗಿದ್ದರು. ಡಿಜೆ ಉತ್ಸವ ಮುಗಿಸಿ ಬೆಳಗಿನ ಜಾವ ಗೋಜನೂರನಿಂದ ಹಿರೇಕೊಪ್ಪಕ್ಕೆ ಬರುವ ವೇಳೆ ನಿದ್ರೆ ಮಂಪರಿನಲ್ಲಿ ಮರಕ್ಕೆ ಡಿಕ್ಕಿಯಾಗಿದೆ. ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ. ಉಳಿದ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಪರಿಣಾಮ ಟಾಟಾಏಸ್ ಗೂಡ್ಸ್ ವಾಹನದ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!