ಉದಯವಾಹಿನಿ, ಕೆ.ಆರ್.ಪುರ: ಕ್ಷೇತ್ರದ ಗೆದ್ದಲಹಳ್ಳಿಯ ಬಿಡಿಎಸ್ ಬಡಾವಣೆಯ ಕಾವೇರಿ ನೀರು ಸಂಪರ್ಕ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ನೂರತ್ತು ಹಳ್ಳಿಗಳ ಪೈಕಿ ಗೆದ್ದಲಹಳ್ಳಿ ಸಹ ಒಂದು ಭಾಗವಾಗಿದ್ದು,ಈ ನಿಟ್ಟಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು,
ಬಡಾವಣೆಯ ನೀರಿನ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಹಲವು ಮನವಿಗಳು ಬಂದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾವೇರಿ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.
ಹಲವು ವರ್ಷಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ,ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಪೂರೈಕೆ ಸಮರ್ಪಕವಾಗಿಯಾಗಲಿದೆ ಎಂದು ನುಡಿದರು.
ನೂರತ್ತು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಕ್ಷೇತ್ರದ ಅಧ್ಯಕ್ಷ ಮುನೇಗೌಡ, ಪ್ರೆಸ್ಟೀಜ್ ಅಂತರಾಷ್ಟ್ರೀಯ ಶಾಲೆಯ ಅಧ್ಯಕ್ಷ ಅಂಜಿನಪ್ಪ, ಬಿಡಿಎಸ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ಇದ್ದರು.
