ಉದಯವಾಹಿನಿ,ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು ೫೬೭೮.೩೨ ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ ೧೯೭೨ರ ಕಲಂ ೩೬(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರುತ್ತದೆ ಎಂದು.ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೩೩ ಪ್ರಭೇದದ ಪಕ್ಷಿಗಳು, ೪೦ ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ತಮ್ಮ ಆದ್ಯತೆಯ ವಿಷಯವಾಗಿತ್ತು ಎಂದು ಹೇಳಿದರು.
ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅತ್ಯಾವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅವರು ಧನ್ಯವಾದವನ್ನು ಹೇಳಿದರು
ಕಳೆದ ಅಕ್ಟೋಬರ್ ೭ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ನಿನ್ನೆ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಎಂದು ತಿಳಿಸಿದರು.
