ಉದಯವಾಹಿನಿ, ಚಿತ್ರದುರ್ಗ : ತಾಲ್ಲೂಕಿನ ಎನ್.ಜಿ. ಹಳ್ಳಿಯ ಶಿಲ್ಪಿ ಕಾಳಾಚಾರ್ ಅವರ ಪುತ್ರ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ವಿನಯ್ ಅವರು ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನೇ ಹೋಲುವ ಮೂರ್ತಿಯನ್ನು ನಿರ್ಮಿಸಿದ್ದು, ಫೆ.1ರಂದು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ರಾಮ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ವಿಶ್ವ ಹಿಂದೂ ಪರಿಷತ್ ನಿರ್ಮಿಸಿರುವ ಈ ರಾಮಮಂದಿರ 2023ರ ಫೆಬ್ರುವರಿಯಲ್ಲಿ ಉದ್ಘಾಟನೆಗೊಂಡಿದೆ. ಈಗ ಅದರ ವಾರ್ಷಿಕೋತ್ಸವದಲ್ಲಿ ವಿನಯ್ ಮರ. ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ನಿರ್ಮಿಸಿರುವ 6.2 ಅಡಿ ಎತ್ತರದ ಬಾಲರಾಮನ ಮೂರ್ತಿ ಪ್ರದರ್ಶನಗೊಳ್ಳಲಿದೆ. ಅಲ್ಲಿರುವ ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ವಿನಯ್ ತಮ್ಮ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ಶಿಲ್ಪ ಕಲಾಕೃತಿಗಳ ರಚನೆಯನ್ನು ಬಿಡುವಿನ ಸಮಯದಲ್ಲಿ ಮಾಡುತ್ತಾರೆ.
‘ತಂದೆ ಕಾಳಾಚಾರ್ ಶಿಲ್ಪಿಯಾಗಿದ್ದು, ಶಿಲ್ಪಕಲಾ ಅಕಾಡೆಮಿಯಿಂದ ಜಕಣಾಚಾರಿ ಹಾಗೂ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಅವರು ತಯಾರಿಸಿದ ಬಾಹುಬಲಿ ಮಹಾಮಸ್ತಕಾಭಿಷೇಕದ ಸ್ವಬ್ರಚಿತ್ರವು ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಥಮ ಬಹುಮಾನ ಪಡೆದಿತ್ತು ನಾನು ಒಂದು ತಿಂಗಳಲ್ಲಿ ರಾಮಲಲ್ಲಾ ಮೂರ್ತಿ ನಿರ್ಮಿಸಿದ್ದೇನೆ. ಮೂರ್ತಿಯ ಸುತ್ತ ವಿಷ್ಣುವಿನ ದಶಾವತಾರ ಹಾಗೂ ಸೂರ್ಯದೇವ ಸೇರಿ 15 ದೇವರುಗಳಿವೆ.
