ಉದಯವಾಹಿನಿ, ನವದೆಹಲಿ: ಹಿಂದೆಂದೂ ಕಾಣದ ಜಿದ್ದಾ ಜಿದ್ದಿನ ಕುರುಕ್ಷೇತ್ರವಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭೆಗೆ ನಾಳೆ ಮತದಾನ ನಡೆಯಲಿದ್ದು ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.
ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಮತದಾನದ ದಿನವಾದ ನಾಳೆ ದೆಹಲಿ ಸರ್ಕಾರ ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ನಗರದಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಕಚೇರಿಗಳಿಗೆ ರಜೆ ಅನ್ವಯಿಸಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಟ್ಟು 1.56 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.ಕಣದಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಈಗಾಗಲೇ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಚುನಾವಣಾ ಅಧಿಕಾರಿ/ ಸಿಬ್ಬಂದಿಗಳು ಇಂದು ಸಂಜೆ ಮತಗಟ್ಟೆಗಳಿಗೆ ತಲುಪಿದ್ದಾರೆ, ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ. ಈ ಬಾರಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ತ್ರಿಕೋಣ ಸ್ಪರ್ಧೆ ಇದೆ.
