ಉದಯವಾಹಿನಿ, ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಪುನಃ 812 ನಿವೇಶನಗಳನ್ನು ಜಪ್ತಿ ಮಾಡಲು ಇ.ಡಿ. ಮುಂದಾಗಿದೆ.
ಮುಡಾದ ಮಾಜಿ ಆಯುಕ್ತ ನಟೇಶ್ ಅಧಿಕಾರಾವಧಿಯಲ್ಲಿ ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ.ಈಗಾಗಲೇ ಈ ನಿವೇಶನಗಳನ್ನು ಯಾರೊಬ್ಬರ ಹೆಸರಿಗೆ ಬದಲಾವಣೆ ಇಲವೇ ನೋಂದಣಿ ಮಾಡದಂತೆ ಮೈಸೂರಿನಲ್ಲಿರುವ ಎಲ್ಲಾ ನೋಂದಣಿ ಕಚೇರಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ಪತ್ರ ಬರೆದಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ನಿವೇಶನ ಮೌಲ್ಯ 81 ಕೋಟಿ ರೂ. ಇದೆ. ಮಾರುಕಟ್ಟೆ ದರ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ. ರವಿ ಎಂಬುವರ ಹೆಸರಲ್ಲಿ 31 ನಿವೇಶನ, ಅಬ್ದುಲ್ ವಾಹಿದ್ ಎಂಬುವರ ಹೆಸರಲ್ಲಿ 41 ನಿವೇಶನ, ಕ್ಯಾಥಡ್ರಾಲ್ ಸೊಸೈಟಿ ಹೆಸರಿನಲ್ಲಿ 40 ನಿವೇಶನ, ಇತರರಿಗೆ ಸೇರಿದ 48 ನಿವೇಶನಗಳು ಸೇರಿದಂತೆ ಒಟ್ಟು 812 ನಿವೇಶನಗಳನ್ನು ಜಪ್ತಿ ಮಾಡಲು ಇ.ಡಿ. ಮುಂದಾಗಿದೆ.2023ರ ಸೆಪ್ಟೆಂಬರ್ 11ರಂದು ರವಿ ಹೆಸರಲ್ಲಿ 31 ನಿವೇಶನಗಳು ನೋಂದಣಿಯಾಗಿವೆ. ಮೈಸೂರು ನಗರದ ಹೃದಯಭಾಗ ಕುವೆಂಪುನಗರದಲ್ಲಿನ 12 ನಿವೇಶನಗಳು, ದಟ್ಟಗಳ್ಳಿ, ವಿಜಯನಗರದಲ್ಲಿ 19 ನಿವೇಶನಗಳು ರವಿ ಹೆಸರಿಗೆ ನೋಂದಣಿಯಾಗಿವೆ.
ಇನ್ನು ಅಬ್ದುಲ್ ವಾಹಿದ್ ಎಂಬುವರ ಹೆಸರಿಗೆ 2023ರ ಮಾರ್ಚ್ 8ರಂದು ಒಂದೇ ದಿನದಲ್ಲಿ 28 ನಿವೇಶನಗಳು ನೋಂದಣಿಯಾಗಿವೆ. ಮತ್ತೆ 2023ರ ಸೆಪ್ಟೆಂಬರ್ 1ರಂದು ಅಬ್ದುಲ್ ವಾಹಿದ್ ಹೆಸರಿಗೆ 13 ವಿಜಯನಗರ, ಜೆ.ಪಿ.ನಗರ, ನಾಚನಹಳ್ಳಿಪಾಳ್ಯದಲ್ಲಿನ ನಿವೇಶನಗಳು ನೋಂದಣಿಯಾಗಿವೆ.
