ಉದಯವಾಹಿನಿ, ಚಿತ್ರದುರ್ಗ: ಭರಮಸಾಗರದಲ್ಲಿರುವ ಐತಿಹಾಸಿಕ, ತುಂಬಿ ತುಳುಕುತ್ತಿರುವ ಭರಮಣ್ಯ ನಾಯಕನ ಕೆರೆಯಲ್ಲಿ ಮಂಗಳವಾರ ದೋಣಿ ವಿಹಾರ ನಡೆಸುವ ಮೂಲಕ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಸ್ವಾಮೀಜಿಯವರು ತಾಲ್ಲೂಕಿನ ಹಲವಾರು ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಿದ್ದು, ಸಿರಿಗೆರೆ ಭಾಗದ ಬಹುತೇಕ ಕೆರೆಗಳು ಮೈದುಂಬಿಕೊಂಡಿವೆ. ಸಮೃದ್ಧಿಯ ಸಂಕೇತವಾಗಿ ಶ್ರೀಗಳು ದೋಣಿ ವಿಹಾರ ನಡೆಸಿ ಹುಣ್ಣಿಮೆ ಮಹೋತ್ಸವಕ್ಕೆ ನಾಂದಿ ಹಾಡಿದರು. ಮುರುಡೇಶ್ವರದಿಂದ ತರಿಸಿದ್ದ ಅಲಂಕೃತ ದೋಣಿಯಲ್ಲಿ ಶ್ರೀಗಳು 20 ನಿಮಿಷ ವಿಹಾರ ನಡೆಸಿದರು. ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ಇಕ್ಕೆಲಗಳಲ್ಲಿ ನಡೆದ ದೋಣಿ ವಿಹಾರವನ್ನು ಸಾವಿರಾರು ಜನರು ಕಣ್ಣುಂಬಿಕೊಂಡರು. ನಂತರ ಭರಮಣ್ಣ ನಾಯಕ ಮಹಾಮಂಟಪದ ಆವರಣಕ್ಕೆ ಬಂದ ಸ್ವಾಮೀಜಿ ಶಿವ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಇದಕ್ಕೂ ಮೊದಲು ಬೆಳಿಗ್ಗೆ, ಸಿರಿಗೆರೆ ಐಕ್ಯಮಂಟಪದಲ್ಲಿ ಶ್ರೀಗಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಭರಮಸಾಗರದತ್ತ ಹೊರಟರು ಮಾರ್ಗದುದ್ದಕ್ಕೂ 32 ಹಳ್ಳಿಗಳಿಗೆ ಭೇಟಿ ನೀಡಿ ಮುಂದೆ ಸಾಗಿದರು. ಸಂಜೆ 5 ಗಂಟೆಗೆ ಭರಮಸಾಗರದ ಭರಮಣ್ಯನಾಯಕನ ಕೆರೆಯಂಗಳ ತಲುಪಿದರು. ಇಳಿಸಂಜೆಯಲ್ಲಿ ನಡೆದ ದೋಣಿ ವಿಹಾರ ನೋಡುಗರ ಕಣ್ಮನ ಸೆಳೆಯಿತು.
