ಉದಯವಾಹಿನಿ, ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದಿನಿಂದ ಸಮರ ವಿಮಾನಗಳ ಪ್ರದರ್ಶನ ತಯಾರಿ ಶುರುವಾಗಿದೆ. ಫೆಬ್ರವರಿ 10 ರಿಂದ 14ರ ವರೆಗೆ ನಡೆಯಲಿರುವ 15ನೆ ಆವೃತ್ತಿಯ ಏರೋ ಇಂಡಿಯಾಗೆ ದೇಶ-ವಿದೇಶಗಳಿಂದ ರಕ್ಷಣಾ ಸಚಿವರು , ವಾಯುಪಡೆಯ ಮುಖ್ಯಸ್ಥರು, ವಿವಿಧ ಕಂಪನಿಗಳ ದಿಗ್ಗಜರು ಭಾಗವಹಿಸುತ್ತಿದ್ದು, ಈ ಬಾರಿ ಅಮೆರಿಕದ ಎಫ್-35 ಖರೀದಿ ಕುರಿತಂತೆ ಭಾರತೀಯ ವಾಯುಪಡೆಯ ಮಹತ್ವದ ಚರ್ಚೆ ನಡೆಯಲಿದೆ.

ಆರಂಭದಲ್ಲಿ ಎಫ್-35 ಮತ್ತು ಎಫ್-16 ಸಮರ ವಿಮಾನಗಳು ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕ ವಾಯುಪಡೆ ತಿಳಿಸಿತ್ತಾದರೂ ನಂತರ ಐರೋಪ್ಯ ರಾಷ್ಟ್ರಗಳು ಹಾಗೂ ಜಾಗತಿಕ, ವೈಮಾನಿಕ ಕಂಪನಿಗಳು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಆಕರ್ಷಿಸಲು ದೊಡ್ಡಮಟ್ಟದ ನಿಯೋಗ ಮತ್ತು ಕಂಪನಿಗಳು ಬಂದಿವೆ.
ಇದರಿಂದಾಗಿ ಆಧುನಿಕ ಪೀಳಿಗೆಯ ಯುದ್ಧ ವಿಮಾನಗಳ ಪೈಪೋಟಿ ನಡೆಯಲಿದೆ. ಇದರ ನಡುವೆ ಭಾರತ ಅಭಿವೃದ್ಧಿಪಡಿಸಿರುವ ತೇಜಸ್ ಹೊಸ ಆವೃತ್ತಿಯ ಜೆಟ್ ವಿಮಾನ ಕೂಡ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.
ಸಮರ ತಂತ್ರಜ್ಞಾನಕ್ಕೆ ಸೂಕ್ತವಾದ ರೆಡಾರ್ಗಳ ಆಧುನಿಕ ಸ್ಪರ್ಶ ಇಲ್ಲಿ ನೋಡಬಹುದಾಗಿದ್ದು, ಬಹುಮುಖ್ಯವಾಗಿ ದೇಶಗಳ ಭದ್ರತೆಗೆ ಇದು ದೊಡ್ಡ ಶಕ್ತಿಯಾಗಿದೆ. ಪ್ರಸ್ತುತ ಭಾರತ ಸರ್ಕಾರ ಫ್ರಾನ್ಸ್ ನ ರಫೆಲ್ ಖರೀದಿ ನಂತರ ಈಗ ಮತ್ತಷ್ಟು ಶಕ್ತಿಶಾಲಿ 5ನೆ ಪೀಳಿಗೆಯ ಯುದ್ಧ ವಿಮಾನಗಳತ್ತ ಚಿತ್ತ ಹರಿಸಿದೆ. ಇದಕ್ಕಾಗಿ ಈಗ ಅಮೆರಿಕದ ಎಫ್-35 ಸೇರಿದಂತೆ ಲಾಕೆಟ್ ಮಾರ್ಟಿನ್ ಸರಣಿಯಲ್ಲಿ ತಯಾರಿಕೆಯಾಗಿರುವ ಯುದ್ಧ ವಿಮಾನಗಳು ಬರುವ ಸಾಧ್ಯತೆಗಳು ದಟ್ಟವಾಗಿವೆ. ಇದರ ನಡುವೆ ಯುರೋ ಫೈಟರ್, ಟೈಫುನ್, ಸುಖೋಯ್ ಸೇರಿದಂತೆ ಹಲವು ಯುದ್ಧ ವಿಮಾನಗಳು ತಮ ಸಾಹಸ ಕಲೆಗಳನ್ನು ಪ್ರದರ್ಶಿಸಲಿದೆ. ಇದಲ್ಲದೆ ವಿದೇಶದಲ್ಲೂ ಚಮತ್ಕಾರ ತೋರಿರುವ ಭಾರತ ವಾಯುಪಡೆಯ ಸೂರ್ಯಕಿರಣ್ ಕೂಡ ತನ್ನ ಆಕರ್ಷಕ ಪ್ರದರ್ಶನ ತೋರಲಿದೆ.

Leave a Reply

Your email address will not be published. Required fields are marked *

error: Content is protected !!